ಹೊಸಪೇಟೆ ಶಂಕರ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಮುಂದ ಸರ್ಕಾರಿ ಶಾಲೆಗಳಲ್ಲಿ ದ್ವಿ ಭಾಷಾ ನೀತಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಹೇರಿಕೆ ವಿರುದ್ಧ ಪ್ರತಿಭಟನೆ ನಡೆಯಿತು. ಎಐಡಿಎಸ್‌ಓ ಜಿಲ್ಲಾ ಅಧ್ಯಕ್ಷ ಜೆ.ಪಿ.ರವಿಕಿರಣ್, ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ, ಪ್ರಮುಖರಾದ ಚಂದ್ರ, ಆಕಾಶ್, ಜ್ಞಾನೇಶ್ ಇತರರಿದ್ದರು. 
ವಿಜಯನಗರ

ಇಂಗ್ಲಿಷ್ ಮಾಧ್ಯಮ ಹೇರಿಕೆ ಅಕ್ಷಮ್ಯ

ಪ್ರಮುಖ ಮುಖ್ಯಾಂಶಗಳು

  • ಎಐಡಿಎಸ್‌ಒ ವಿಜಯನಗರ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ಹೊಸಪೇಟೆ: ಸರ್ಕಾರಿ ಶಾಲೆಗಳಲ್ಲಿ ದ್ವಿ ಭಾಷಾ ನೀತಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮ ಹೇರಿಕೆ ವಿರುದ್ಧ ಎಐಡಿಎಸ್‌ಒ ವಿಜಯನಗರ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ಇಲ್ಲಿನ
ಶಂಕರ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರತಿಭಟನೆ ನಡೆಸಿತು.
ಎಐಡಿಎಸ್‌ಒ ಜಿಲ್ಲಾ ಅಧ್ಯಕ್ಷ ಜೆ.ಪಿ.ರವಿಕಿರಣ್ ಮಾತನಾಡಿ, ರಾಜ್ಯದ 5 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮವನ್ನು ಆರಂಭಿಸಲು ರಾಜ್ಯ ಸರ್ಕಾರವು ಆದೇಶಿಸಿದೆ. ಎಲ್ಲ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಶಾಲೆ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ತರಬೇತಿ ನೀಡಲಾಗುತ್ತಿದೆ. ಸರ್ಕಾರವು ಇದನ್ನು ದ್ವಿಭಾಷಾ ಮಾಧ್ಯಮ ಎಂದು ಕರೆಯುತ್ತಿದ್ದರೂ ಇಂಗ್ಲಿಷಿನಲ್ಲೇ ಪಾಠ ಮಾಡಬೇಕೆಂದು ಹಲವೆಡೆ ಶಿಕ್ಷಕರಿಗೆ ನಿರ್ದೇಶನ ನೀಡಲಾಗುತ್ತಿದೆ. ವಿಜಯನಗರ ಜಿಲ್ಲೆಯ 140 ಶಾಲೆಗಳಲ್ಲಿ ಜೂನ್‌ನಿಂದ ಕನ್ನಡ ಮಾಧ್ಯಮ ಬದಲಿಗೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದೆಂದು ಪಾಲಕರಿಗೆ ತಿಳಿಸಲಾಗಿದೆ. ಸರ್ಕಾರದ ಈ ನಡೆ ಇದು ಅಕ್ಷಮ್ಯವಾಗಿದೆ ಎಂದು ಆಗ್ರಹಿಸಿದರು.
ಎಐಡಿಎಸ್‌ಓ ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ ಮಾತನಾಡಿ, ಸರ್ಕಾರವು ಅತ್ಯಂತ ಅಪ್ರಜಾತಾಂತ್ರಿಕವಾಗಿ ರಾಜ್ಯದ ವಿದ್ಯಾರ್ಥಿಗಳಿಂದ ಕನ್ನಡ ಭಾಷೆಯನ್ನೇ ಕಿತ್ತುಕೊಳ್ಳುತ್ತಿದೆ. ಇಂಗ್ಲಿಷ್ ಕಲಿಕೆ ಅವಶ್ಯಕ ನಿಜ. ಆದರೆ ಕನ್ನಡವನ್ನು ಕೊಂದು ಇಂಗ್ಲಿಷ್ ಕಲಿಸಲು ಹೊರಟಿರುವುದು ನಾಡಿನ ಜನತೆಗೆ ಮಾಡಿರುವ ದ್ರೋಹ ಹಾಗೂ ಕನ್ನಡಕ್ಕೆ ಮಾಡಿರುವ ಅಪಚಾರವಾಗಿದೆ. ನಾಡಿನ ವಿದ್ಯಾರ್ಥಿಗಳು, ಯುವಜನರು, ಪೋಷಕರು, ಸಾಹಿತಿಗಳು ಹಾಗೂ ಶಿಕ್ಷಣ ಪ್ರೇಮಿ ಜನತೆ ಕನ್ನಡವನ್ನು ರಕ್ಷಿಸಲು ನಾಗರಿಕ ಜನರು ಧ್ವನಿಯತ್ತಬೇಕು ಎಂದು ಒತ್ತಾಯಿಸಿದರು.