ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಫಸಲು ಖರೀದಿಸುವಂತೆ ಆಗ್ರಹಿಸಿ ಕೊಟ್ಟೂರಿನಲ್ಲಿ ತಹಸೀಲ್ದಾರ್ ಜಿ.ಕೆ.ಅಮರೀಶ್‌ಗೆ ಕೃಷಿಕರು ಮನವಿ ಸಲ್ಲಿಸಿದರು. ವಿನಾಯಕ ಮುದೇನೂರು, ದಿವಾಕರ, ಸಂಗಮೇಶ್ವರ ಇದ್ದರು. 
ವಿಜಯನಗರ

ಕನಿಷ್ಠ ಬೆಂಬಲ ಬೆಲೆ ಕಾಯ್ದೆಬದ್ಧಗೊಳಿಸಲಿ

ಅಶೋಕ್ ಕುಮಾರ್ ಎನ್

ಪ್ರಮುಖ ಮುಖ್ಯಾಂಶಗಳು

  • Minimum Support Price
  • Act
ಕೊಟ್ಟೂರು: ರೈತರ ಪರ ಎಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆಗಳಿಗೆ ಸಮರ್ಪಕವಾಗಿ ಕನಿಷ್ಠ ಬೆಂಬಲ ಬೆಲೆ ನೀಡುತ್ತಿಲ್ಲ. ಇದು ಸರ್ಕಾರಗಳ ನಿರ್ಲಕ್ಷ್ಯವಾಗಿದೆ ಎಂದು ಕೃಷಿಕ ವಿನಾಯಕ ಮುದೇನೂರು ದೂರಿದರು.
ಪಟ್ಟಣದ ತಹಸೀಲ್ದಾರ್ ಜಿ.ಕೆ.ಅಮರೀಶ್‌ಗೆ ಮನವಿ ಸಲ್ಲಿಸಿ ಗುರುವಾರ ಮಾತನಾಡಿದರು. ಕೇಂದ್ರ ಸರ್ಕಾರ ಕಳೆದ ಎರಡು ದಶಕಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಹಲವಾರು ಕಾರ್ಪೋರೇಟ್ ಸಂಸ್ಥೆಗಳಿಗೆ ತ್ವರಿತವಾಗಿ ಸಾವಿರಾರು ಕೋಟಿ ನೆರವು ನೀಡಿದೆ. ಆದರೆ ದೇಶದ ಬೆನ್ನೆಲುಬು ಎಂದು ಹೇಳುವ ರೈತರ ಪರ ಕಾನೂನು ಜಾರಿಗೊಳಿಸಲು ಹಿಂಜರಿಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸಲು ಹಲವಾರು ವರ್ಷಗಳಿಂದ ರೈತರು ಹೋರಾಟ ನಡೆಸಿದ್ದಾರೆ. ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳಂತೆ ಸಿ 2 ಪ್ಲಸ್ ಶೇ.50 ಆಧಾರದ ಮೇಲೆ 23 ಬೆಳೆಗಳಿಗೆ ಕಾನೂನು ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಳೆಗಾರರ ಪರಿಸ್ಥಿತಿ ಈ ಕುರಿತ ಅನ್ಯಾಯವನ್ನು ಮತ್ತಷ್ಟು ದೃಢೀಕರಿಸುತ್ತದೆ. ಮೆಕ್ಕೆಜೋಳ ದರ ಕನಿಷ್ಠ ಬೆಂಬಲ ಬೆಲೆಗಿಂತಗಲೂ ಕಡಿಮೆ ಇದೆ. ಕೂಡಲೇ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಫಸಲು ಖರೀದಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಕೃಷಿಕರಾದ ದಿವಾಕರ, ಸಂಗಮೇಶ್ವರ, ವಿಠಲ ಗಜಾಪುರ, ಅಜ್ಜಯ್ಯ ಇತರರಿದ್ದರು.