ಹೂವಿನಹಡಗಲಿಯಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಕಾಯಕ್ರಮವನ್ನು ಶಾಸಕ ಕೃಷ್ಣನಾಯ್ಕ ಉದ್ಘಾಟಿಸಿದರು. 
ವಿಜಯನಗರ

ಅಸಮಾನತೆ ನಿವಾರಣೆಗೆ ಶ್ರಮ

ಅಶೋಕ್ ಕುಮಾರ್ ಎನ್
ಹೂವಿನಹಡಗಲಿ: ಡಾ.ಬಾಬು ಜಗಜೀವನರಾಮ್ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ತತ್ವ-ಆದರ್ಶಗಳು ಮತ್ತು ಸಂದೇಶವನ್ನು ಇಂದಿನ ಯುವ ಜನತೆಗೆ ತಲುಪಿಸುವ ಕೆಲಸವಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಬಾಬು ಜಗಜೀವನರಾಮ್ ಅವರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಹಿಂದುಳಿದ ಜನಾಂಗದ ಮಕ್ಕಳು ವಿದ್ಯಾವಂತರಾಗಿ ಉನ್ನತ ಹುದ್ದೆಯನ್ನು ಹೊಂದುವಂತಾಬೇಕು. ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದುಳಿದ ಜನಾಂಗದಲ್ಲಿ ಹುಟ್ಟಿ ಈ ಸಮಾಜದಲ್ಲಿನ ಸಂಕೋಲೆಗಳನ್ನು ಕಿತ್ತು ಹಾಕುವ ಮೂಲಕ ಮನುಷ್ಯರೆಲ್ಲರೂ ಒಂದೇ ಎಂಬ ಭಾವವನ್ನು ಎಲ್ಲರಲ್ಲಿಯೂ ಬಿತ್ತುವ ಕೆಲಸ ಮಾಡಿದರು. ದೇಶದ ದೀನ, ದಲಿತರ ಧ್ವನಿಯಾಗಿ ಹೋರಾಟ ಮಾಡಿದ್ದಾರೆ ಎಂದರು.
ತಾಪಂ ಇಒ ಪರಮೇಶ್ವರ ಮಾತನಾಡಿ, ನಮ್ಮಲ್ಲಿನ ಅಸಮಾನತೆ ಹೋಗಲಾಡಿಸಲು ಮಹನೀಯರ ಜಯಂತಿಗಳನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಒಳಮೀಸಲಾತಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಹುಚ್ಚೆಂಗೆಪ್ಪ, ಬಿಜೆಪಿ ವಿಭಾಗೀಯ ಸಂಘಟನಾ ಪ್ರಧಾನ ಕಾಯದರ್ಶಿ ಪೂಜಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ, ಸಿಪಿಐ ಮಲ್ಲಪ್ಪ ಹೂಗಾರ, ಪ್ರಮುಖರಾದ ವಿಜಯಕುಮಾರ್, ಪಿ.ನಿಂಗಪ್ಪ, ಶ್ರೀಧರನಾಯ್ಕ, ಆನಂದ, ಗೋಣೆಪ್ಪ, ಮುಂಡವಾಡ ಉಮೇಶ್, ಗುಡ್ಡದಯ್ಯ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಇತರರಿದ್ದರು.