ಹಂಪಿಯಲ್ಲಿ ಡಸ್ಟ್ ಬಿನ್ 
ವಿಜಯನಗರ

ಹಂಪಿಯಲ್ಲಿ ಕಾಣಲಿವೆ ಡಸ್ಟ್‌ ಬಿನ್‌

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • 5 ಲಕ್ಷ ವೆಚ್ಚದ ಯೋಜನೆ
  • ಖಾಲಿ ನೀರಿನ ಬಾಟಲ್‌ಗಳಿಗೆ ಕಡಿವಾಣ
  • ಹವಾಮದಿಂದ ಸಿದ್ದತೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಹಂಪಿ ಪರಿಸರದಲ್ಲಿ ಪ್ಲಾಸ್ಟಿಕ್ ನೀರಿನ ಖಾಲಿ ಬಾಟಲ್ ಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮ) ಐದು ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಡಸ್ಟ್‌ ಬಿನ್ ಅಳವಡಿಸಲು ಮುಂದಾಗಿದೆ.
ತುಂಗಭದ್ರಾ ನದಿ ದಂಡೆಯಲ್ಲಿ ಕಸ, ಚಿಂದಿ ಬಟ್ಟೆ ಮತ್ತಿತರ ತ್ಯಾಜ್ಯ ಬಿದ್ದಿರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರು ಮೂಲ ಸೌಲಭ್ಯಗಳಿಲ್ಲದೆ ಬೇಸರ ವ್ಯಕ್ತಪಡಿಸುತ್ತಾರೆ. ನದಿ ದಂಡೆಯ ಸ್ನಾನಘಟ್ಟದಲ್ಲಿ ಶುಚಿಗೊಳ್ಳಲು ಹೋದರೆ ಅಲ್ಲಿ ಬಿದ್ದಿರುವ ಬಟ್ಟೆಗಳು ಸ್ವಾಗತಿಸುತ್ತವೆ. ಕಲ್ಲು ಬಂಡೆಗಳ ಮೇಲೆ ಕಸ ಸುಟ್ಟ ಬೂದಿ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಣ್ಣಿಗೆ ರಾಚುತ್ತವೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸ್ವಚ್ಛತೆ ಮತ್ತು ಸ್ಮಾರಕಗಳ ರಕ್ಷಣೆಗಾಗಿ ನೂರಾರು ಸಿಬ್ಬಂದಿಯನ್ನು ಹೊಂದಿದ್ದರೂ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಮುಖ್ಯವಾಗಿ ಎಲ್ಲೆಡೆ ಹರಡಿರುವ ನೀರಿನ ಖಾಲಿ ಬಾಟಲ್‌ಗಳು
ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರ್ನಾಲ್ಕು ಬಗೆಯ ಡಸ್ಟ್‌ ಬಿನ್ ಮಾದರಿಗಳನ್ನು ಪ್ರಸ್ತಾವನೆ ಮಾಡಲಾಗಿತ್ತು. ಆದರೆ, ಕೆಲ ಮಾದರಿಗಳಿಗೆ ಕೇಂದ್ರ ಪುರಾತತ್ವ ಇಲಾಖೆ ತಕರಾರು ತೆಗೆದ ಕಾರಣ ಇದೀಗ ಕಬ್ಬಿಣದ ಜಾಲರಿಯಲ್ಲಿ ನೀರಿನ ಬಾಟಲ್ ಮಾದರಿಯ ಡಸ್ಟ್‌ಬಿನ್ ತಯಾರಿಸಲಾಗಿದೆ. ಇದು ಮೊಬೈಲ್ ಡಸ್ಟ್‌ ಬಿನ್ ಮಾದರಿಯಲ್ಲಿದ್ದು, ಅಗತ್ಯವಿಲ್ಲ ದಿದ್ದರೆ ಬೇರೆಡೆಗೆ ಸ್ಥಳಾಂತರ ಮಾಡಬಹುದು. ಇಂತಹ ವಿನ್ಯಾಸಗಳು ಇತರೆ ಯುನೆಸ್ಕೊ ತಾಣಗಳಲ್ಲಿಯೂ ಇವೆ. ಈ ಮಾದರಿಗೆ ಕೇಂದ್ರ ಪುರಾತತ್ವ ಇಲಾಖೆ ಕೂಡ ಅನುಮೋದನೆ ನೀಡಿದೆ.
"

ಹಂಪಿಯಲ್ಲಿ ಕಸದ ಜತೆ ನೀರಿನ ಖಾಲಿ ಬಾಟಲ್‌ಗೆ ಕಡಿವಾಣ ಹಾಕಲು ಹಂಪಿ ಮತ್ತು ಆನೆಗುಂದಿಯಲ್ಲಿ 50 ಡಸ್ಟ್ ಬಿನ್‌ಗಳನ್ನು ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ಕೆಲ ದಿನಗಳಲ್ಲಿ ಡಸ್ಟ್ ಬಿನ್ ಸ್ಮಾರಕಗಳ ಬಳಿ ಇಡಲಾಗುತ್ತದೆ. ಸ್ವಚ್ಛತೆ ಅರಿವು ಕೂಡ ಮೂಡಿಸಲಾಗುತ್ತದೆ.