ಕೂಡ್ಲಿಗಿ ಮದಕರಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಆಯೋಜಿಸಿದ್ದ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿದರು.  
ವಿಜಯನಗರ

ಡಾ.ಶಿವಕುಮಾರ ಸ್ವಾಮೀಜಿ ಸಾಮಾಜಿಕ ಸೇವೆ ಅನುಕರಣೀಯ

ಕೂಡ್ಲಿಗಿ: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅನ್ನ, ಅಕ್ಷರ ಮತ್ತು ಜ್ಞಾನ ಎಂಬ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ಬೆಳಕಾಗಿದ್ದಾರೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಡಾ.ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ನಿಮಿತ್ತ ಪಟ್ಟಣದ ಮದಕರಿ ವೃತ್ತದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ದಾಸೋಹ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮೂಲಕ ಉಚಿತ ಶಿಕ್ಷಣ, ಅನ್ನ ಮತ್ತು ಆಶ್ರಯ ನೀಡುವುದರೊಂದಿಗೆ ಶ್ರೀಗಳು ನಡೆದಾಡುವ ದೇವರು ಎಂದು ಪ್ರಸಿದ್ಧರಾದರು. ಬಡ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಕುಂಠಿತವಾಗಬಾರದು ಎಂದು ಸುಸಜ್ಜಿತ ಶಿಕ್ಷಣ ಸಂಸ್ಥೆ ಜತೆಗೆ ವಸತಿ ನಿಲಯಗಳನ್ನು ನಿರ್ಮಿಸಿದರು. ಸ್ವಾಮೀಜಿ ಸಾಮಾಜಿಕ ಸೇವೆ ಅನುಕರಣೀಯ ಹಾಗೂ ಆದರ್ಶಪ್ರಾಯವಾಗಿದೆ ಎಂದರು.
ಪ್ರಾಥಮಿಕ ಶಾಲೆಯಿಂದ ಪದವಿ ಮತ್ತು ವೃತ್ತಿಪರ ಶಿಕ್ಷಣದವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಆಧ್ಯಾತ್ಮಿಕ ಮತ್ತು ಲೌಕಿಕ ಜ್ಞಾನ ನೀಡಿ ಯುವಜನತೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಪುರಸ್ಕಾರ ನೀಡಬೇಕಿದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದಿಂದ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎಂ.ಗುರುಸಿದ್ದನಗೌಡ, ಜಿಲ್ಲಾ ನಿರ್ದೇಶಕ ಕೆ.ನಾಗರಾಜ, ತಾಲೂಕು ಅಧ್ಯಕ್ಷ ಸುನೀಲ್ ಗೌಡ, ಕಾರ್ಯದರ್ಶಿ ಜಿ.ಎಸ್.ಗಿರೀಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಹೊಂಬಾಳೆ ರೇವಣ್ಣ, ಪ್ರಮುಖರಾದ ರೇಖಾ ಮಲ್ಲಿಕಾರ್ಜುನ, ಕಾವಲಿ ಶಿವಪ್ಪನಾಯಕ, ಪಿ.ಶಿವರಾಜ್, ನಂದಿ ಬಸವರಾಜ, ಜಿ.ಶಿವಣ್ಣ, ಬಿ.ಮಂಜುನಾಥ, ಕಟ್ಟೆ ಬಸಣ್ಣ, ಕೆ.ಎಂ.ವೀರೇಶ್, ಕೊಡದೀರಪ್ಪ, ವಿಭೂತಿ ವೀರಣ್ಣ ಇದ್ದರು.