ಹೊಸಪೇಟೆ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಭೀಮಾ ಗಾಯನ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ.ನಾಗಣ್ಣ ಕಿಲಾರಿ ಉದ್ಘಾಟಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ, ಪ್ರಾಧ್ಯಾಪಕರಾದ ಸಿ.ದೇವಣ್ಣ, ದ್ವಾರಕಸ್ವಾಮಿ, ಗುರುರಾಜ್ ಇತರರಿದ್ದರು.
- ಭೀಮಗಾಯನ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ನಾಗಣ್ಣ ಕಿಲಾರಿ ಅಭಿಪ್ರಾಯ
ಹೊಸಪೇಟೆ: ಸಮಾಜದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಸಾಮಾಜಿಕ ಮತ್ತು ಶೈಕ್ಷಣಿಕ ಹೀಗೆ ಎಲ್ಲಾ ಹಂತದಲ್ಲಿಯೂ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಬೃಹತ್ ಸಂವಿಧಾನವೇ ಕಾರಣ ಎಂದು ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ನಾಗಣ್ಣ ಕಿಲಾರಿ ಆಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದ ಭೀಮಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಂಗೀತ ಮತ್ತು ಹಾಡಿನ ಮೂಲಕ ಜನರಿಗೆ ತಲುಪಿಸುವ ಸದುದ್ದೇಶದಿಂದ ಭೀಮ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾಜದ ದುರ್ಬಲ ವರ್ಗದವರು, ಮಹಿಳೆಯರು ಮತ್ತು ಭೂಮಿಯ ಮೇಲಿನ ಸಕಲ ಜೀವ ಸಂಕುಲಕ್ಕೆ ಸಮಾನವಾಗಿ ಬದುಕುವ ಹಕ್ಕು ಕಲ್ಪಿಸಿ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಕತ್ತಲಲ್ಲಿದ್ದ ಸಮಾಜಕ್ಕೆ ಬೆಳಕನ್ನು ನೀಡಿವೆ. ಯುವ ಪೀಳಿಗೆ ಅಂಬೇಡ್ಕರ್, ಬುದ್ಧ, ಗಾಂಧಿ ಮತ್ತು ಬಸವಣ್ಣನವರ ಹಾದಿಯಲ್ಲಿ ನಡೆದು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ ಮಾತನಾಡಿ, ಸಮಾಜದ ಪ್ರಮುಖ ಸುಧಾರಕರಾದ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಸಂಗೀತದ ಮೂಲಕ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಹೋರಾಟ ಮತ್ತು ಇತರ ಸುಧಾರಕರ ತತ್ವಗಳನ್ನರಿತು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದರು.