ಸಂಡೂರಿನಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ಪುರಸಭೆ ಸಿಬ್ಬಂದಿ ಮಾರೆಮ್ಮ ರಾಕ್ಷಸ ವೇಷ ತೊಟ್ಟು ಜಾಗೃತಿ ಮೂಡಿಸಿದರು. ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ ಇತರರಿದ್ದರು. 
ವಿಜಯನಗರ

ಪ್ಲಾಸ್ಟಿಕ್ ಬಳಸಿ ಭೂಮಿ ಹಾಳು ಮಾಡದಿರಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಅನಿಲ್ ಕುಮಾರ್ ಸಲಹೆ
  • ಪ್ಲಾಸ್ಟಿಕ್ ನಿಷೇಧ ಜಾಗೃತಿ
ಸಂಡೂರು: ಪ್ಲಾಸ್ಟಿಕ್ ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕು. ಜೀವಿಗಳಿಗೆ ಇರುವುದು ಒಂದೇ ಭೂಮಿ ಅದನ್ನು ಪ್ಲಾಸ್ಟಿಕ್‌ನಿಂದ ಹಾಳು ಮಾಡುವುದು ಬೇಡ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ಹೇಳಿದರು.
ಪುರಸಭೆ ಮಾರುಕಟ್ಟೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾರುಕಟ್ಟೆಗೆ ಹೋಗುವಾಗ ಬಟ್ಟೆ ಚೀಲ ತೆಗೆದುಕೊಂಡು ಹೋಗಿ ಅದರಲ್ಲಿ ತರಕಾರಿ ಹಾಗೂ ಇತರ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ನಿರ್ಧರಿಸಿ ಅದನ್ನು ಪಾಲಿಸಿ ಎಂದರು.
ತಾಪಂ ಇಒ ಮಡಗಿನ ಬಸಪ್ಪ ಮಾತನಾಡಿ, ಉತ್ತರ ಕನ್ನಡ ಜಿಲ್ಲೆ, ಉಡುಪಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಾಗಿದೆ. ಸಂಡೂರಿನಲ್ಲೂ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಸದಿರಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶ್ರೀ ಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ ಎಸ್.ನಾನಾವಟೆ ಮಾತನಾಡಿ, ಸ್ವಚ್ಛ ಸಂಡೂರು ಆಗಬೇಕೆಂದರೆ ಜನ ಜಾಗೃತರಾಗಬೇಕು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಪ್ಲಾಸ್ಟಿಕ್ ಚೀಲದಲ್ಲಿ ಟೀ ತಂದು ಕೊಡುತ್ತಾರೆ. ಇತ್ತೀಚೆಗೆ ಶಾಲಾ ಮಕ್ಕಳಿಗೆ ಸಂಸ್ಕಾರ, ಕೌಶಲ, ಸಾಮಾಜಿಕ ಬದಲಾವಣೆ ಕುರಿತು ಪಾಠ ಮಾಡುತ್ತಿದ್ದೇವೆ. ಆದರಂತೆ ಮುಖ್ಯಾಧಿಕಾರಿಗಳ ಜತೆ ಪ್ಲಾಸಿಕ್ ನಿಷೇಧ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಆರೋಗ್ಯಾಧಿಕಾರಿ ಶಿವರಂಜಿನಿ, ಮುಖ್ಯಾಧಿಕಾರಿ ವಿನಯಕುಮಾರ ಗೌಡ, ಪರಿಸರ ಇಂಜಿನಿಯರ್ ಅನ್ನಪೂರ್ಣ, ಸಿಡಿಪಿಒ ಪಿ.ನಾಗರಾಜ, ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ ದೇಸಾಯಿ, ಮುಖ್ಯಶಿಕ್ಷಕ ಬಸನಗೌಡ, ಪುರಸಭೆ ಸಿಬ್ಬಂದಿ ಮಾರೆಮ್ಮ, ಶಾಂತಮ್ಮ ಇತರರಿದ್ದರು.