ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ ಹೂವಿನಹಡಗಲಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಹಾಗೂ ತಾಲೂಕು ವಕೀಲರ ಸಂಘದಿಂದ ಜಾಗೃತಿ ಜಾಥಾ ನಡೆಯಿತು.
ಹೂವಿನಹಡಗಲಿ: ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವುದರಿಂದ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚುತ್ತಿವೆ. ವಾಹನ ಸವಾರರು ಜವಾಬ್ದಾರಿ ಮರೆಯಬಾರದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಅಕ್ಷತಾ ಟಿ. ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಮಾಸಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಗುರುವಾರ ಮಾತನಾಡಿದರು. ಬಹುತೇಕ ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ನೀಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ಚಾಲನಾ ಪರವಾನಗಿ ಪಡೆಯದವರು ವಾಹನ ಚಲಾಯಿಸುವುದು ಅಪರಾಧವಾಗಿದೆ ಎಂದು ತಿಳಿಸಿದರು.
ಅಪಘಾತದಲ್ಲಿ ವಾಹನ ಸವಾರ ಮೃತರಾದರೆ ಅವರನ್ನು ನಂಬಿದ ಕುಟುಂಬ ಅತಂತ್ರವಾಗುತ್ತದೆ. ರಸ್ತೆ ಸುರಕ್ಷತೆ ನಿಯಮ ಪಾಲಿಸಿ ಎಂದು ಹೇಳುವ ಪೊಲೀಸರನ್ನು ಪ್ರಶ್ನಿಸುವ ಘಟನೆಗಳು ಹೆಚ್ಚಾಗುತ್ತಿವೆ. ಯಾರೂ ಕೂಡ ನಿಮಗೆ ಕೆಟ್ಟದ್ದನ್ನು ಮಾಡಬೇಕು ಎಂದು ಹೇಳುವುದಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದರು.
ನಂತರ ನ್ಯಾಯಾಲಯದಿಂದ ಶಾಸ್ತ್ರಿ ವೃತ್ತದವರೆಗೆ ಜಾಥಾ ನಡೆಯಿತು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಜೈನ್, ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಾದ ಮಹಮ್ಮದ್ ಶರೀಫ್ ಸಾಬ್, ಸತ್ಯನಾರಾಯಣ, ಎಂ.ಪಿ.ಎಂ.ಉಮೇಶ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಶಿವಲಿಂಗಪ್ಪ, ಕಾರ್ಯದರ್ಶಿ ಪ್ರಶಾಂತ್, ಸಹಕಾರ್ಯದರ್ಶಿ ಪತ್ರಬಸಪ್ಪ, ವಕೀಲರಾದ ಅಟವಾಳಗಿ ಕೊಟ್ರೇಶ್, ಶ್ರೀಧರ್, ಮಲ್ಲಿಕಾರ್ಜುನ, ಹನುಮಂತ ಇತರರಿದ್ದರು.