ಕೊಟ್ಟೂರು ತಾಲೂಕಿನ ಹರಾಳು ಗ್ರಾಮದಲ್ಲಿ ಕತ್ತೆಗಳಿಗೆ ಮದುವೆ ಮಾಡಿ ಮೆರವಣಿಗೆ ನಡೆಸಲಾಯಿತು.
ಕೊಟ್ಟೂರು: ಹರಾಳು ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಶುಕ್ರವಾರ ಕತ್ತೆಗಳಿಗೆ ಮದುವೆ ಮಾಡಿ, ಮೆರವಣಿಗೆ ನಡೆಸಿದರು.
ಗ್ರಾಮದಲ್ಲಿ ಕತ್ತೆಗಳು ಇಲ್ಲದ ಕಾರಣ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಿಂದ ಕತ್ತೆಗಳನ್ನು ತಂದು,ಬಾಸಿಂಗ ಕಟ್ಟಿ ಹೊಸ ಬಟ್ಟೆ ಹಾಕಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು. ಗ್ರಾಮಸ್ಥ ದುಮ್ಮಾಡಿ ಚನ್ನಬಸಪ್ಪ ಮಾತನಾಡಿ, ಮಳೆ ಸಕಾಲದಲ್ಲಿ ಬರದೆ ಬೆಳೆಗಳು ಒಣಗುತ್ತಿವೆ. ಬರಗಾಲ ನಿವಾರಣೆಗಾಗಿ ಕತ್ತೆಗಳ ಮದುವೆ ಮಾಡುವುದು ಸಂಪ್ರದಾಯವಾಗಿದೆ ಎಂದು ಹೇಳಿದರು. ಗ್ರಾಮಸ್ಥರಾದ ಬಣಕಾರ ರವೀಂದ್ರ, ಬಸನಗೌಡ ದೇಸಾಯಿ, ಹುಲ್ಮನೆ ರೇವಪ್ಪ, ಪೂಜಾರ ಕೊಟ್ರೇಶ್, ನಿಲುವಂಜಿ ವಿಶಾಲಾಕ್ಷಿ, ದುಮ್ಮಾಡಿ ನಾಗಮ್ಮ, ಅಗನೂರು ಮಂಜುನಾಥ ಇತರರಿದ್ದರು.