ಕೊಟ್ಟೂರು ತಾಲೂಕಿನ ಹ್ಯಾಳ್ಯಾ ಗ್ರಾಮದ ಮೊದಲನೇ ರೈಲ್ವೇ ಗೇಟ್ ಮುಚ್ಚುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್ ಈಶ್ವರಗೌಡ, ರೈತರಾದ ಬಡಿಗೇರ ಕೊಟ್ರೇಶ, ಕೊನಾಪುರ ಚಿಕ್ಕೀರಪ್ಪ, ದೇವಿಸಿದ್ದಪ್ಪರ ಬಸವರಾಜ್, ಕೊಟ್ರೇಶ್ ಇತರರಿದ್ದರು.
- ಹ್ಯಾಳ್ಯಾ ಸುತ್ತಲಿನ ರೈತರು ಆಗ್ರಹ
- ಕೊಟ್ಟೂರು ರೈಲ್ವೆ ಗೇಟ್ ಆಕ್ಷೇಪ
ಕೊಟ್ಟೂರು; ಹ್ಯಾಳ್ಯಾ ಗ್ರಾಮದ ಮೊದಲನೇ ರೈಲ್ವೆ ಗೇಟ್ ಮುಚ್ಚಿದರೆ ರೈತರು ಜಮೀನುಗಳಿಗೆ ಹೋಗಿಬರಲು ತೀವ್ರ ಸಮಸ್ಯೆ ಎದುರಾಗಲಿದ್ದು, ರೈಲ್ವೆ ಅಧಿಕಾರಿಗಳು ಗೇಟ್ ಮುಚ್ಚುವ ಚಿಂತನೆ ಕೈಬಿಡಬೇಕೆಂದು ರೈಲ್ವೆ ಗೇಟ್ ಬಳಿ ರೈತರು ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ಈಶ್ವರಗೌಡ ಮಾತನಾಡಿ, ಈ ರೈಲ್ವೆ ಗೇಟ್ ಮಾರ್ಗವು 1500 ಎಕರೆ ಪ್ರದೇಶದ ಕೃಷಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿದೆ. ಗೇಟ್ ಮುಚ್ಚುವುದರಿಂದ ಹ್ಯಾಳ್ಯಾ, ಲೊಟ್ಟನಕೇರಿ, ಮೋತಿಕಲ್ ತಾಂಡಾ ಹಾಗೂ ಮಲ್ಲನಾಯಕನಹಳ್ಳಿ ಗ್ರಾಮದ ರೈತರಿಗೆ ಆರೇಳು ಕಿಮೀ ಸುತ್ತವರಿದು ಕೃಷಿ ಜಮೀನುಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ. ರೈಲ್ವೆ ಇಲಾಖೆಯು ಒಬ್ಬ ಸಿಬ್ಬಂದಿ ನೇಮಕ ಮಾಡುವ ವಿಷಯ ಇಟ್ಟುಕೊಂಡು ರೈತರಿಗೆ ತೊಂದರೆ ಕೊಡುವುದು ಸರಿಯಲ್ಲ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಹಾಗೂ ಸಚಿವರು ಗಂಭೀರವಾಗಿ ಯೋಚಿಸಬೇಕು ಎಂದರು.
ರೈತ ಬಡಿಗೇರ ಕೊಟ್ರೇಶ ಮಾತನಾಡಿ ರೈಲ್ವೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಇಲ್ಲಿನ ವಾಸ್ತವಾಂಶ ತಿಳಿಯಬೇಕು. ಏಕಾಏಕಿ ಗೇಟ್ ಮುಚ್ಚಬಾರದು. ಬದಲಾವಣೆ ಅಗತ್ಯವಿದ್ದರೆ, ಮೊದಲು ಈ ಭಾಗದ ಗ್ರಾಮಸ್ಥರೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲು ರೈಲ್ವೆ ಅಧಿಕಾರಿಗಳು ಮುಂದಾಗಬೇಕೆಂದರು.
ರೈತರಾದ ಬಸವರಾಜ್ ಸಂಪನ್ನ, ಕೊನಾಪುರ ಚಿಕ್ಕೀರಪ್ಪ, ದೇವಿಸಿದ್ದಪ್ಪರ ಬಸವರಾಜ್, ಕೊಟ್ರೇಶ್, ಕರಿಬಸಪ್ಪ, ರಾಜು ಟಿ., ಕೆ.ಕೊಟ್ರೇಶ್, ಬೆಳದೇರಿ ಶೇಖರಪ್ಪ, ಕೊಟ್ರಯ್ಯ ಸಕ್ರಳ್ಳಿ, ಹುಲುಗಪ್ಪ, ಬೇಲಿಗೌಡ್ರು ನಾಗರಾಜ್, ಅಜ್ಜನಗೌಡ ಸೇರಿದಂತೆ ನೂರಾರು ರೈತರಿದ್ದರು.