ಕೊಟ್ಟೂರಿನ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಭಕ್ತರು ದರ್ಶನಕ್ಕಾಗಿ ಸಾಲು ನಿಂತಿರುವುದು.
ಕೊಟ್ಟೂರು: ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಂಗಳವಾರ 20 ಸಾವಿರಕ್ಕೂ ಹೆಚ್ಚು ಭಕ್ತರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದರು.
ದೇವಸ್ಥಾನದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಮಹಾಭಿಷೇಕ ಹಾಗೂ ಇತರ ಪೂಜಾ ಕೈಂಕಾರ್ಯ ನಡೆದವು. ಭಕ್ತರಿಗೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸಂಚಾರ ಸಿಕ್ಕು ಉಂಟಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ದೇವಸ್ಥಾನದ ಇಒ ಮಲ್ಲಪ್ಪ, ದೇವಸ್ಥಾನಕ್ಕೆ ಪ್ರತಿ ಸೋಮವಾರ, ಗುರುವಾರ ಹಾಗೂ ಅಮಾವಾಸ್ಯೆ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ವಾಹನ ನಿಲ್ಲಿಸಲು ಹಾಗೂ ಇತರ ಮೂಲಸೌಕರ್ಯ ಕಲ್ಪಿಸಲು ದೇವಸ್ಥಾನಕ್ಕೆ ಒಂದು ಕಿ.ಮೀ. ದೂರದಲ್ಲಿ ಒಂದು ಎಕರೆ ಸರ್ಕಾರಿ ಜಮೀನು ನೀಡುವಂತೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.