ಹೊಸಪೇಟೆ ಜಿಲ್ಲಾ ಪಂಚಾಯಿತಿ ಕಚೇರಿಗೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಸೋಮವಾರ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ವೀರಣ್ಣ ನಾಯ್ಕ, ಪಿಡಿಒಗಳಾದ ರವಿಂದ್ರನಾಥ, ಬಿ.ಗಂಗಾಧರ, ಗುತ್ತೇಪ್ಪ ತಳವಾರ್, ಉಮೇಶ್ ಜಾಗಿರ್ದಾರ್, ಪುಷ್ಪಲತಾ, ವಾಸುಕಿ, ಮಂಜುಳ ರಾಣಿ ಇತರರಿದ್ದರು.
- ಜಿಲ್ಲಾ ಪಂಚಾಯಿತಿ ಕಚೇರಿಗೆ ಪಿಡಿಒ ಸಂಘದಿಂದ ಮನವಿ ಸಲ್ಲಿಕೆ
ಹೊಸಪೇಟೆ: ಆತ್ಮಹತ್ಯೆಗೆ ಶರಣಾದ ಗದಗ ಜಿಲ್ಲೆಯ ಕೊತಬಾಳು ಗ್ರಾಪಂ ಪಿಡಿಒ ಸಾವಿನ ಸಮಗ್ರ ತನಿಖೆ ನಡೆಸುವುದು ಹಾಗೂ ಕುಟುಂಬದವರಿಗೆ ಪರಿಹಾರದ ಜತೆಗೆ ಸರ್ಕಾರಿ ಉದ್ಯೋಗ ನೀಡುವುದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಒತ್ತಡ ರಹಿತ ಕೆಲಸದ ವಾತಾವಣ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿಗೆ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಕೊತಬಾಳು ಪಿಡಿಒ ಮುಕ್ತಂ ಹುಸೇನ್ ಅವರಿಗೆ ಎರಡು ಗ್ರಾಪಂ ಜವಾಬ್ದಾರಿ ಇದ್ದ ಕಾರಣ ಕೆಲಸ ಒತ್ತಡ, ಹಿಂದಿನ ಪ್ರಕರಣದ ಲೋಕಾಯುಕ್ತ ತನಿಖೆ ಹಿನ್ನೆಲೆ ವೇತನ ಬಾಕಿ ಉಳಿಸಿಕೊಂಡಿರುವುದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕು. ಕ್ಷುಲ್ಲಕ ಕಾರಣಗಳಿಗೆ ಪಿಡಿಒಗಳ ಅಮಾನತು ನಿಲ್ಲಬೇಕು. ಕಾಲಮಿತಿಯೊಳಗೆ ತನಿಖೆ ಮುಗಿದು ಅಮಾನತು ತೆರವುಗೊಳಿಸಬೇಕು.
ಮೀನಾಕ್ಷಿ ಸುಂದರಂ ಸಮಿತಿ ವರದಿಯನ್ನು ಪಡೆದು ಅದರಲ್ಲಿನ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಮೂಲಕ ನೌಕರರ ಹಿತ ಕಾಪಾಡಬೇಕು. ಈಗ ಬೇಸಿಗೆಯಾದ್ದರಿಂದ ಮನರೇಗಾ ಯೋಜನೆಯಡಿ ಕೂಲಿಕಾರ್ಮಿಕರ ಹಾಜರಾತಿ ಎನ್‌ಎಂಎಂಎಸ್ ಆಪ್‌ನಲ್ಲಿನ ದೋಷ ಹಾಗೂ ತಾಂತ್ರಿಕ ತೊಂದೆಯಿಂದ ಕಾರ್ಮಿಕರಿಗೆ ಕೆಲಸ ನೀಡುವುದು ತೊಂದರೆಯಾಗುತ್ತಿದೆ. ಹೀಗಾಗಿ, ಮಾನವ ದಿನಗಳ ಸೃಜನೆ ಮಾಡುವಂತೆ ಒತ್ತಡ ಹಾಕಬಾರದು ಸೇರಿ ನಾನಾ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.