ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ರಾಜ್ಯ ಮಸಣ ಕಾರ್ಮಿಕರ ಸಂಘದಿAದ ಮಂಗಳವಾರ ಪ್ರತಿಭಟನೆ ನಡೆಯಿತು. ಸಂಘದ ಜಿಲ್ಲಾ ಅಧ್ಯಕ್ಷೆ ಬಿ.ಮಾಳಮ್ಮ, ಪ್ರಧಾನ ಕಾರ್ಯದರ್ಶಿ ಪಿ.ರುದ್ರೇಶ್, ಪ್ರಮುಖರಾದ ಪಿ.ಚಾಂದಬಿ, ಚಂದ್ರಪ್ಪ ಇತರರಿದ್ದರು.
- ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಹೊಸಪೇಟೆ: ರಾಜ್ಯದಲ್ಲಿ ಶತಮಾನಗಳಿಂದ ಬಿಟ್ಟಿ ಚಾಕರಿ ಹಾಗೂ ಶವ ಸಂಸ್ಕಾರ ಕಾಯಕದಲ್ಲಿ ತೊಡಗಿರುವ ಮಸಣ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ತಕ್ಷಣವೇ ಮುಂದಾಗಬೇಕು ಎಂದು ರಾಜ್ಯ ಮಸಣ ಕಾರ್ಮಿಕರ ಸಂಘದ ವಿಜಯನಗರ ಜಿಲ್ಲಾ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿತು.
ಸರ್ಕಾರವು ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿ ಮಸಣ ಕಾರ್ಮಿಕರಿಗೆ ನೀಡಿರುವ ಸೌಲಭ್ಯವನ್ನು ಸಂಘವು ಸ್ವಾಗತಿಸಿದೆಯಾದರೂ, ಪ್ರಸ್ತುತ ಇರುವ 18 ರಿಂದ 60 ವರ್ಷಗಳ ವಯೋಮಿತಿಯನ್ನು ಕನಿಷ್ಠ 75 ವರ್ಷಗಳಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ. ವಾಸ್ತವದಲ್ಲಿ 60 ವರ್ಷ ದಾಟಿದ ಹಿರಿಯರೇ ಈ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಅವರನ್ನು ಯೋಜನೆಯಿಂದ ಹೊರಗಿಡುವುದು ಅನ್ಯಾಯ ಎಂದು ಆಗ್ರಹಿಸಿದರು.
45 ವರ್ಷ ಮೇಲ್ಪಟ್ಟ ಎಲ್ಲಾ ಮಸಣ ಕಾರ್ಮಿಕರಿಗೆ ಮಾಸಿಕ 5 ಸಾವಿರ ಸಾಮಾಜಿಕ ಪಿಂಚಣಿ ಜಾರಿಗೊಳಿಸಬೇಕು. ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ರಾಜ್ಯ ಸರ್ಕಾರವೇ ವಂತಿಗೆ ಪಾವತಿಸಬೇಕು. ಸ್ಥಳೀಯ ಸಂಸ್ಥೆಗಳನ್ನು ಮಾಲೀಕರನ್ನಾಗಿಸಿ ಕಾರ್ಮಿಕರಿಗೆ ಭವಿಷ್ಯ ನಿಧಿ ಸೌಲಭ್ಯ ಕಲ್ಪಿಸಬೇಕು. ಶವ ಹೂಳುವ ಹಾಗೂ ಕುಣಿ ತೋಡುವ ಕೆಲಸವನ್ನು ನಿರ್ಮಾಣ ಕೆಲಸವೆಂದು ಪರಿಗಣಿಸಿ, ಕಟ್ಟಡ ಕಾರ್ಮಿಕರ ಸೌಲಭ್ಯಗಳನ್ನು ವಿಸ್ತರಿಸಬೇಕು. ಪ್ರತಿ ಕುಟುಂಬಕ್ಕೆ ವಸತಿ ಸೌಲಭ್ಯ ಮತ್ತು ಜೀವನೋಪಾಯಕ್ಕಾಗಿ ತಲಾ 5 ಎಕರೆ ಕೃಷಿ ಭೂಮಿ ನೀಡಬೇಕು.