ಹರಪನಹಳ್ಳಿ ತಾಪಂ ಇಒ ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ಗಂಗಪ್ಪ, ಟಿಎಚ್‌ಒ ಪೃಥ್ವಿಗೆ ವಿವಿಧ ಪ್ರಗತಿಪರ ಸಂಘಟನೆಗಳು ಮನವಿ ಸಲ್ಲಿಸಿದವು.
ಹರಪನಹಳ್ಳಿ: ಅರಸೀಕೆರೆ ಹೋಬಳಿ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿದವು.
ತಾಲೂಕಿನ ಅತಿ ದೊಡ್ಡ ಹೋಬಳಿಯಾಗಿರುವ ಅರಸೀಕೆರೆ ತಾಲೂಕು ಕೇಂದ್ರದ ಅರ್ಹತೆ ಹೊಂದಿದ್ದು, ಹಲವಾರು ಮೂಲ ಸೌಕರ್ಯಗಳಿಂದ ನಲುಗಿದೆ. ವಿವಿಧ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಅರಸೀಕೆರೆಗೆ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಹೋಬಳಿ ವ್ಯಾಪ್ತಿಗೆ 11 ಗ್ರಾಮ ಪಂಚಾಯಿತಿಗಳು ಒಳಪಟ್ಟಿದ್ದು, ಶೈಕ್ಷಣಿಕವಾಗಿ ಗಮನ ಸೆಳೆದಿದೆ. ಶಾಲೆ, ಕಾಲೇಜುಗಳಿಗೆ ನಿತ್ಯ ನೂರಾರು ವಿದ್ಯಾರ್ಥಿಗಳು ಬರುತ್ತಾರೆ. ಪ್ರಾಥಮಿಕ ಶಾಲೆಗಳಿಂದ ಹಿಡಿದು ಪದವಿ ಶಿಕ್ಷಣದವರೆಗೆ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಒಂದು ಬಾಲಕರ ಹಾಸ್ಟೆಲ್ ಹೊರತುಪಡಿಸಿದರೆ ಯಾವುದೇ ಹಾಸ್ಟೆಲ್ ಇಲ್ಲ. ಬಾಲಕಿಯರ ಹಾಸ್ಟೆಲ್ ಇಲ್ಲದೆ ವಿದ್ಯಾರ್ಥಿನಿಯರ ಶಿಕ್ಷಣವನ್ನು ಮೊಟಕು ಗೊಳಿಸುವಂತಾಗಿದೆ. ವ್ಯವಸ್ಥಿತ ಸಾರಿಗೆ ಸೌಲಭ್ಯವಿಲ್ಲ. ಬಸ್ ನಿಲ್ದಾಣ ಉದ್ಘಾಟನೆ ಭಾಗ್ಯ ಕಾಣದೆ ಕಳೆ ಗುಂದಿದೆ ಎಂದು ದೂರಿದರು.
ಸಮುದಾಯ ಆರೋಗ್ಯ ಕೇಂದ್ರ ಸೌಲಭ್ಯಗಳಿಂದ ವಂಚಿತವಾಗಿದೆ, ವೈದ್ಯರ ಸೇವೆ, ಚಿಕಿತ್ಸಾ ಸೌಲಭ್ಯಗಳು ಇಲ್ಲದೆ ರೋಗಿಗಳು ನಿತ್ಯ ಪರದಾಡುವಂತಾಗಿದೆ, ಆ್ಯಂಬುಲೆನ್ಸ್ ಸೇವೆ ಇಲ್ಲದೆ ರೋಗಿಗಳು ಮೃತಪಟ್ಟಿದ್ದಾರೆ. ಪ್ರತಿ ವರ್ಷ ನೀರಿನ ಸೌಲಭ್ಯವಿಲ್ಲದೆ ಹೋಬಳಿ ಜನ ಹಾಹಾಕಾರ ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ 105 ಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಹೋಬಳಿ ಮತದಾರರು ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಮತದಾನ ಮಾಡುತ್ತಿದ್ದಾರೆ. ಶಾಸಕ ಬಿ.ದೇವೇಂದ್ರಪ್ಪ ಕಾಣೆಯಾಗಿದ್ದಾರೆ, ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಶಾಸಕ ವಿದೇಶ ಪ್ರವಾಸದಲ್ಲಿ ಮೋಜು-ಮಸ್ತಿಯಲ್ಲಿ ತಲ್ಲೀನರಾಗಿದ್ದಾರೆಂದು ಪ್ರತಿಭಟನಾಕಾರರು ಕಪ್ಪು ಬಟ್ಟೆ ಪ್ರದರ್ಶನ ಮಾಡಿದರು.