ಕೂಡ್ಲಿಗಿ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ದಲಿತಪರ ಸಂಘಟನೆಗಳಿಂದ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.
ಕೂಡ್ಲಿಗಿ: ದೇಶದಲ್ಲಿನ ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಎರಡು ಕಣ್ಣುಗಳಿದ್ದಂತೆ ಎಂದು ಬಿಇಒ ಮೈಲೇಶ್ ಬೇವೂರು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ಸಮುದಾಯಗಳಿಂದ ಹಮ್ಮಿಕೊಂಡಿದ್ದ ಮಾಜಿ ಉಪ ಪ್ರಧಾನಿ ಬಾಬುಜಗಜೀವನ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಣ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್ ಅವರ ಬದುಕು ತಿಳಿಸಿ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಬಾಬೂಜಿ ಎಂದೇ ಹೆಸರಾಗಿದ್ದ ಬಾಬು ಜಗಜೀವನರಾಮ್ ಅವರ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಮನೋಭಾವ ಸಮಾಜಕ್ಕೆ ಮಾದರಿಯಾಗಿದೆ. ಮೂರು ದಶಕ ಕೇಂದ್ರ ಮಂತ್ರಿಯಾಗಿ ಆಡಳಿತದ ಅಪಾರ ಅನುಭವ ಗಳಿಸಿದ್ದರು. ಸಾರಿಗೆ, ಆಹಾರ, ರೈಲ್ವೆ, ಕೃಷಿ, ಸಮುದಾಯ ಅಭಿವೃದ್ಧಿ, ಕಾರ್ಮಿಕ ಮತ್ತು ಉದ್ಯೋಗ ಪುನರ್ವಸತಿ ಕೆಲಸವನ್ನು ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ ಎಂದರು.
ಸರಳತೆಯ ಸಾಕಾರಮೂರ್ತಿಯಾಗಿದ್ದ ಬಾಬೂಜಿ ಅವರು, ಬಡತನದಲ್ಲಿ ಹುಟ್ಟಿದ್ದು ನಮಗೆ ಮುಖ್ಯವಾಗಬಾರದು, ನಮ್ಮ ಪರಿಶ್ರಮದ ಮೂಲಕ ಸಮಾಜದಲ್ಲಿ ಬದಲಾವಣೆಗಳನ್ನು ತರುವುದು ನಮ್ಮ ಧ್ಯೇಯವಾಗಬೇಕು ಎನ್ನುವ ಸಂದೇಶ ನೀಡಿದ್ದಾರೆ. ಬಾಬೂಜಿ ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸದೆ ಅವರ ಆದರ್ಶ ಹಾಗೂ ತತ್ವಗಳನ್ನು ನಾವು ಪಾಲಿಸುವ ಮುಖೇನ ಅವರು ನಂಬಿದ್ದ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳೋಣ ಎಂದು ಬಿಇಒ ಮೈಲೇಶ್ ಬೇವೂರು ತಿಳಿಸಿದರು.
ಇದಕ್ಕೂ ಮುನ್ನ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತಹಸೀಲ್ದಾರ್ ವಿ.ಕೆ.ನೇತ್ರಾವತಿ, ತಾಪಂ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ಬಾಬು ಜಗಜೀವನರಾಮ್ ಸಂಘದ ತಾಲೂಕು ಅಧ್ಯಕ್ಷ ಸಾಸಲವಾಡ ಶಿವಣ್ಣ, ತಾಪಂ ಮಾಜಿ ಸದಸ್ಯೆ ವಿಶಾಲಾಕ್ಷಿ ರಾಜಣ್ಣ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಜಿಲಾನ್, ಸಿಪಿಐ ಪ್ರಲ್ಹಾದ್ ಚನ್ನಗಿರಿ, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ಬಸಪ್ಪ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್.ದುರುಗೇಶ್, ಮಹೇಶ್, ಡಿ.ಎಚ್.ದುರುಗೇಶ್, ಬಂಡೆ ರಾಘವೇಂದ್ರ, ಸಾಲುಮನಿ ರಾಘವೇಂದ್ರ, ಸಂತೋಷ, ಹನುಮೇಶ್, ಸಮಾಜ ಕಲ್ಯಾಣ ಇಲಾಖೆಯ ಪಕ್ಕೀರಪ್ಪ ಇತರರಿದ್ದರು.