ಕನ್ನಡ ವಿಶ್ವವಿದ್ಯಾಲಯ 
ವಿಜಯನಗರ

ಕನ್ನಡ ವಿಶ್ವವಿದ್ಯಾಲಯಕ್ಕೆ ಕರೆಂಟ್ ಕಟ್

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • 16.5 ಲಕ್ಷ ರೂಪಾಯಿ ಬಿಲ್ ಬಾಕಿ
  • ಅಂಧಕಾರದಲ್ಲಿ ಜ್ಞಾನ ದೇಗುಲ
  • ದೈನಂದಿನ ಕೆಲಸಗಳಿಗೆ ತೊಂದರೆ
  • ಹಾಸ್ಟೆಲ್ ವಿದ್ಯಾರ್ಥಿಗಳ ಪರದಾಟ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ನಾಡು-ನುಡಿ-ಸಂಸ್ಕೃತಿ ಹೆಮ್ಮೆಯ ಪ್ರತೀಕವಾಗಿರುವ ಕನ್ನಡದ ಜ್ಞಾನ ದೇಗುಲಕ್ಕೆ ಜೆಸ್ಕಾಂ ಅಧಿಕಾರಿಗಳು ಕರೆಂಟ್ ಶಾಕ್ ನೀಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಬರೋಬ್ಬರಿ 16.5 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಿರುವ ಅಧಿಕಾರಿಗಳು, ಇಡೀ ಕ್ಯಾಂಪಸ್‌ನ ವಿದ್ಯುತ್ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿದ್ದಾರೆ.
ಪರಿಣಾಮವಾಗಿ ಇಡೀ ವಿಶ್ವವಿದ್ಯಾಲಯದ ಆವರಣ ಕತ್ತಲಲ್ಲಿ ಮುಳುಗಿದ್ದು, ದೈನಂದಿನ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ತರಗತಿಗಳು, ಆಡಳಿತಾತ್ಮಕ ಕೆಲಸಗಳು ಹಾಗೂ ಸಂಶೋಧನಾ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಸರ್ಕಾರದಿಂದ ಬಜೆಟ್ ಅನುಮೋದನೆಯಾಗಿ ಕೇವಲ ಎರಡು ದಿನಗಳಷ್ಟೇ ಕಳೆದಿದೆ. ಅನುದಾನ ಕೈಸೇರಿದ ತಕ್ಷಣವೇ ಬಾಕಿ ಇರುವ ಸಂಪೂರ್ಣ ಹಣ ಪಾವತಿಸುತ್ತೇವೆ ಎಂದು ಕುಲಪತಿ ಡಾ. ಪರಮಶಿವಮೂರ್ತಿ ಅವರು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಕಠಿಣ ನಿಲುವು ತಳೆದಿದ್ದಾರೆ.
ನೂರಾರು ವಿದ್ಯಾರ್ಥಿಗಳ ಭವಿಷ್ಯ ಮತ್ತು ಮಾನವೀಯತೆಯನ್ನು ಅಧಿಕಾರಿಗಳು ಮರೆತಿದ್ದೇಕೆ ಮತ್ತು ಅಷ್ಟೊಂದು ತುರ್ತಾಗಿ ವಿದ್ಯುತ್ ಕಡಿತಗೊಳಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಎದ್ದಿದೆ. ಕನ್ನಡದ ಹೆಮ್ಮೆಯ ಜ್ಞಾನ ದೇಗುಲವನ್ನು ಇಂತಹ ದುಸ್ಥಿತಿಗೆ ತಳ್ಳಿರುವ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಹಾಗೂ ಕನ್ನಡಾಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಬೇಕಾಗಿದೆ.
ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದರಿಂದ ವಿಶ್ವವಿದ್ಯಾಲಯದ ದೈನಂದಿನ ಪಾಠ-ಪ್ರವಚನಗಳಿಗೆ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಅತ್ಯಂತ ದಯನೀಯ ಸ್ಥಿತಿ ಎಂದರೆ, ವಿದ್ಯಾರ್ಥಿಗಳ ಹಾಸ್ಟೆಲ್‌ಗಳು ಕತ್ತಲ ಕೂಪವಾಗಿ ಮಾರ್ಪಟ್ಟಿವೆ. ತೀವ್ರ ಸೆಕೆಯಲ್ಲಿ ಹಾಗೂ ಕತ್ತಲಲ್ಲಿ ಕಲಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಭಾಷೆ-ಸಂಸ್ಕೃತಿ ಬೆಳೆಸುವ ವಿಶ್ವವಿದ್ಯಾಲಯವೊಂದು ಹೀಗೆ ಹಣದ ಕೊರತೆಯಿಂದ ಕತ್ತಲಲ್ಲಿ ಮುಳುಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೊಂದಿಗೆ ಭದ್ರತೆಯ ಆತಂಕವೂ ಎದುರಾಗಿದೆ. ವಿವಿ ಆವರಣವು ದಟ್ಟವಾದ ಗಿಡಗಂಟಿಗಳಿಂದ ಕೂಡಿದ್ದು, ವನ್ಯಮೃಗಗಳ ಆವಾಸಸ್ಥಾನಕ್ಕೆ ಹತ್ತಿರದಲ್ಲಿದೆ. ಸದ್ಯ ಕ್ಯಾಂಪಸ್ ಆವರಣದಲ್ಲಿ ಚಿರತೆ, ಕರಡಿ ಹಾಗೂ ವಿಜಂತುಗಳ ಕಾಟ ವಿಪರೀತವಾಗಿದೆ. ರಾತ್ರಿಯಾಗುತ್ತಿದ್ದಂತೆ ಇಡೀ ಕ್ಯಾಂಪಸ್ ಅಂಧಕಾರದಲ್ಲಿ ಮುಳುಗುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಸ್ಟೆಲ್‌ನಿಂದ ಹೊರಬರಲು ಹೆದರುವಂತ ಪರಿಸ್ಥಿತಿಯಿದೆ.
ಹೀಗೆ ಆಗುತ್ತಿರುವುದು ಮೂರನೇ ಬಾರಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಇದೇ ಮೊದಲೇನಲ್ಲ, ಇದು ಮೂರನೇ ಬಾರಿಯಾಗಿದೆ. 2023ರಲ್ಲಿ ಮೊದಲ ಬಾರಿಗೆ ವಿದ್ಯುತ್ ಬಿಲ್ ಬಾಕಿ ಉಳಿದು ಸಂಪರ್ಕ ಕಡಿತವಾಗಿತ್ತು. ನಂತರ 2025ರಲ್ಲಿ ಬರೋಬ್ಬರಿ 1.5 ಕೋಟಿ ರೂ. ಬಾಕಿ ಉಳಿಸಿಕೊಂಡಾಗ ಜೆಸ್ಕಾಂ ಸಂಪರ್ಕ ಕಟ್ ಮಾಡಿತ್ತು. ಆಗ ಸರ್ಕಾರ ಮಧ್ಯಪ್ರವೇಶಿಸಿ ವಿಶೇಷ ಅನುದಾನ ಬಿಡುಗಡೆ ಮಾಡಿ ಬಿಲ್ ಪಾವತಿಸಿತ್ತು. ಈಗ ಕಳೆದ ನಾಲ್ಕು ತಿಂಗಳಿನಿಂದ ಒಟ್ಟು 16.5 ಲಕ್ಷ ರೂ. ಬಿಲ್ ಬಾಕಿ ಇದ್ದು, ಜೆಸ್ಕಾಂ ಅಧಿಕಾರಿಗಳು ಮತ್ತೊಮ್ಮೆ ವಿದ್ಯುತ್ ಸರಬರಾಜು ಬಂದ್ ಮಾಡಿದ್ದಾರೆ.
"

ಕನ್ನಡ ವಿಶ್ವವಿದ್ಯಾಲಯ: ಜೆಸ್ಕಾಂಗೆ ನಾಲ್ಕು ತಿಂಗಳ ಬಿಲ್ ಬಾಕಿ ಇದೆ. ಹಳೇ ಬಿಲ್ ಎಲ್ಲ ಪಾವತಿಯಾಗಿದೆ. ಸರ್ಕಾರದ ಬಜೆಟ್ ಅನುಮೋದನೆಯಾಗಿ ಎರಡು ದಿನ ಆಗಿದೆ. ಅನುದಾನ ಬಂದ ಕೂಡಲೇ ಬಿಲ್ ಪಾವತಿ ಮಾಡುತ್ತೇವೆ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಮಾತು ಕೇಳದೆ ವಿದ್ಯುತ್ ಕಡಿತ ಮಾಡಿದ್ದಾರೆ.

— ಡಾ. ಪರಮಶಿವಮೂರ್ತಿ ಕುಲಪತಿ, ಕನ್ನಡ ವಿಶ್ವವಿದ್ಯಾಲಯ
"

ಕನ್ನಡ ವಿಶ್ವವಿದ್ಯಾಲಯದ ವಿದ್ಯುತ್ ಬಂದ್ ಮಾಡಿರುವ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳುವೆ. ಕನ್ನಡಕ್ಕಾಗಿ ಆರಂಭ ಆಗಿರುವ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯನ್ನು ಸರ್ಕಾರ ಪರಿಹರಿಸುತ್ತದೆ.

— ಎಚ್.ಆರ್. ಗವಿಯಪ್ಪ ಶಾಸಕ, ವಿಜಯನಗರ