ಟಿಬಿಡ್ಯಾಂ ಕ್ರಸ್ಟ್‌ ಗೇಟ್ ಗೆ ಪೇಯಿಂಟ್ ಮಾಡುತ್ತಿರುವುದು 
ವಿಜಯನಗರ

ಕ್ರಸ್ಟ್‌ಗೇಟ್ ಅಳವಡಿಕೆ ಅಂತಿಮ ಹಂತಕ್ಕೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಪೇಂಟಿಂಗ್ ಕಾರ್ಯಕ್ಕೆ ಚಾಲನೆ
  • ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ 33 ಗೇಟ್‌ಗಳ ಅಳವಡಿಕೆ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ತುಂಗಭದ್ರಾ ಜಲಾಶಯದ ಪುನಶ್ಚೇತನ ಕಾರ್ಯ ಭರದಿಂದ ಸಾಗಿದ್ದು, ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ ಈಗಾಗಲೇ 26 ಗೇಟ್‌ಗಳ ಅಳವಡಿಕೆ ಪೂರ್ಣಗೊಂಡಿದೆ. ಉಳಿದ ಗೇಟ್‌ಗಳ ಜೋಡಣೆ ಪ್ರಗತಿಯಲ್ಲಿದ್ದು, ಅಳವಡಿಕೆಯಾದ ಗೇಟ್‌ಗಳಿಗೆ ಪೇಂಟಿಂಗ್ ಮಾಡುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ.
ಜಲಾಶಯದಲ್ಲಿ ಕಳೆದ ಡಿಸೆಂಬರ್‌ನಿಂದ ಹಳೆಯ ಕ್ರಸ್ಟ್‌ಗೇಟ್‌ಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದ ತುಂಗಭದ್ರಾ ಜಲಾಶಯ ಮಂಡಳಿಯು (ಟಿಬಿಬಿ), ಪ್ರಸ್ತುತ ಎಲ್ಲ ಹಳೆಯ ಗೇಟ್‌ಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದೆ. ಉತ್ಪಾದನಾ ಹಂತದಲ್ಲೂ ವೇಗ ಕಂಡುಕೊಂಡಿರುವ ಮಂಡಳಿ, ಈಗಾಗಲೇ 32 ಹೊಸ ಕ್ರಸ್ಟ್‌ಗೇಟ್‌ಗಳ ತಯಾರಿಕೆಯನ್ನು ಪೂರೈಸಿದ್ದು, ಕೇವಲ ಒಂದು ಗೇಟ್ ತಯಾರಿಕೆ ಮಾತ್ರ ಬಾಕಿಯಿದೆ. 2024ರ ಡಿ. 24ರಿಂದ ಹೊಸ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸ್ತುತ 26 ಗೇಟ್‌ಗಳು ಸುಸ್ಥಿತಿಯಲ್ಲಿವೆ. ಬಾಕಿ ಉಳಿದಿರುವ ಏಳು ಗೇಟ್‌ಗಳ ಅಳವಡಿಕೆ ಕಾರ್ಯವು ಶೇ. 40 ಮುಗಿದಿದ್ದು, ಮುಂದಿನ 15 ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಜಲಾಶಯದಲ್ಲಿ ಹೊಸ ಚೈನ್ ಹಾಗೂ ಗೇರ್‌ಪಾರ್ಟ್ಸ್‌ಗಳ ಬದಲಾವಣೆ ಪ್ರಕ್ರಿಯೆಯನ್ನು ಹೊರತುಪಡಿಸಿ, ಇನ್ನು ಕೆಲವೇ ದಿನಗಳಲ್ಲಿ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಸಂಪೂರ್ಣವಾಗಲಿದೆ. 33 ಗೇಟ್‌ಗಳಿಗೆ ತಲಾ ಎರಡರಂತೆ ಒಟ್ಟು 66 ಹೊಸ ಚೈನ್‌ಗಳನ್ನು 5.8 ಕೋಟಿ ರೂ. ವೆಚ್ಚದಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ತಯಾರಿಸಲಾಗುತ್ತಿದೆ. ಇದೇ ತಿಂಗಳ ಕೊನೆಯ ವಾರದಲ್ಲಿ ಈ ಚೈನ್‌ಗಳು ಜಲಾಶಯಕ್ಕೆ ತಲುಪುವ ಸಾಧ್ಯತೆಯಿದ್ದು, ಬಂದ ತಕ್ಷಣವೇ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮೇ ತಿಂಗಳ ಕೊನೆಯ ವಾರದೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಟಿಬಿಬಿ ಮೂಲಗಳು ಖಚಿತಪಡಿಸಿವೆ.
ಜಲಾಶಯದ 19ನೇ ಕ್ರಸ್ಟ್‌ಗೇಟ್ ಕಳಚಿಬಿದ್ದ ಘಟನೆಯ ನಂತರ, ಸುಮಾರು ಒಂದೂವರೆ ವರ್ಷದ ಬಳಿಕ ಗೇಟ್‌ಗಳ ಬದಲಾವಣೆಗೆ ಚಾಲನೆ ನೀಡಲಾಗಿತ್ತು. ಆರಂಭದ ಒಂದು ತಿಂಗಳು ಕೆಲಸ ವಿಳಂಬವಾಗಿದ್ದರೂ ಮೊದಲ ಗೇಟ್‌ನ ಯಶಸ್ವಿ ಅಳವಡಿಕೆಯ ನಂತರ ಕಾರ್ಯವು ಶರವೇಗ ಪಡೆದುಕೊಂಡಿದೆ. ಕೇವಲ ಮೂರು ತಿಂಗಳ ಅವಧಿಯಲ್ಲಿ 26 ಗೇಟ್‌ಗಳನ್ನು ಅಳವಡಿಸಲಾಗಿದ್ದು, ಸದ್ಯ ಎಂಟು ಗೇಟ್‌ಗಳಿಗೆ ಪೇಂಟಿಂಗ್ ಮಾಡಲು ಅನುಮತಿ ದೊರೆತಿದೆ. ಈಗಾಗಲೇ 4, 17, 18 ಮತ್ತು 19ನೇ ಗೇಟ್‌ಗಳ ಪೇಂಟಿಂಗ್ ಪೂರ್ಣಗೊಂಡಿದ್ದು, 20, 31, 32 ಹಾಗೂ 33ನೇ ಗೇಟ್‌ಗಳ ಬಣ್ಣದ ಕೆಲಸ ಪ್ರಗತಿಯಲ್ಲಿದೆ.
"

ಜಲಾಶಯದಲ್ಲಿ ಈವರೆಗೆ 26 ಗೇಟ್‌ಗಳನ್ನು ಅಳವಡಿಸಲಾಗಿದೆ. ಉಳಿದ ಏಳು ಗೇಟ್‌ಗಳ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ 15 ದಿನಗಳಲ್ಲಿ ಎಲ್ಲ ಗೇಟ್‌ಗಳ ಜೋಡಣೆ ಮುಕ್ತಾಯವಾಗಲಿದೆ. ಪೇಂಟಿಂಗ್ ಕಾರ್ಯವೂ ಆರಂಭವಾಗಿದ್ದು, ಹೊಸ ಚೈನ್‌ಗಳು ಮುಂದಿನ ವಾರ ಬರಲಿವೆ. ಮೇ ಅಂತ್ಯದೊಳಗೆ ಜಲಾಶಯದ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.