ತುಂಗಭದ್ರಾ ಜಲಾಶಯ 
ವಿಜಯನಗರ

ನವೀಕೃತ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆಗೆ ಕ್ಷಣಗಣನೆ

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ಜಲಾಶಯದಲ್ಲಿ ಹಬ್ಬದ ವಾತಾವರಣ
  • ಹೊಡಪೇಟೆ-ಮುನಿರಾಬಾದ್ ನಲ್ಲಿ ಹೈ ಅಲರ್ಟ್!
ಹೊಸಪೇಟೆ: ಮೂರು ರಾಜ್ಯಗಳ ಜೀವನಾಡಿಯಾಗಿರುವ ನಗರದ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಈಗ ಹಬ್ಬದ ಸಂಭ್ರಮ ಮನೆಮಾಡಿದೆ. ಜಲಾಶಯದ ನವೀಕರಣಗೊಂಡ ಕ್ರಸ್ಟ್ ಗೇಟ್‌ಗಳ ಮಹತ್ವದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಡೀ ಜಲಾಶಯದ ಆವರಣ ಸಕಲ ಸಿದ್ಧತೆಗಳೊಂದಿಗೆ ಕಂಗೊಳಿಸುತ್ತಿದೆ.
ಜಲಾಶಯದ ಪ್ರವೇಶ ದ್ವಾರವನ್ನು ಸಾಂಪ್ರದಾಯಿಕ ತಳಿರು ತೋರಣಗಳು ಹಾಗೂ ಆಕರ್ಷಕ ಹೂವುಗಳಿಂದ ಸೃಂಗರಿಸಲಾಗಿದ್ದು, ಕಣ್ಣುಮನ ಸೆಳೆಯುತ್ತಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಕೇಂದ್ರ ಜಲಶಕ್ತಿ ಸಚಿವರು ಹಾಗೂ ಮೂರು ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ) ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಗಣ್ಯಾತಿಗಣ್ಯರ ಭೇಟಿಯ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲಾಡಳಿತ ಹಾಗೂ ನೀರಾವರಿ ಇಲಾಖೆ, ಟಿ.ಬಿ.ಡ್ಯಾಂ ಆಡಳಿತ ಅಲರ್ಟ್ ಆಗಿದೆ.

ಹೆಜ್ಜೆ ಹೆಜ್ಜೆಗೂ ಖಾಕಿ ಕಾವಲು

ಗಣ್ಯರ ಆಗಮನ ಹಾಗೂ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಪರಿಗಣಿಸಿ, ತುಂಗಭದ್ರಾ ಜಲಾಶಯದ ಸುತ್ತಮುತ್ತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಲಾಶಯದ ಪ್ರವೇಶ ದ್ವಾರದಲ್ಲಿ ಖಾಕಿ ಕಾವಲು ದಟ್ಟವಾಗಿದ್ದು, ಪ್ರತಿಯೊಂದು ಹೆಜ್ಜೆಯಲ್ಲೂ ಪೊಲೀಸ್ ಸರ್ಪಗಾವಲು ನಿಯೋಜಿಸಲಾಗಿದೆ.

ಕಟ್ಟುನಿಟ್ಟಿನ ತಪಾಸಣೆ

ಜಲಾಶಯದ ಒಳಗಡೆ ಪ್ರವೇಶಿಸುವ ಪ್ರತಿಯೊಬ್ಬರ ಐಡಿ ಕಾರ್ಡ್ (ಗುರುತಿನ ಚೀಟಿ) ಮತ್ತು ಅಧಿಕೃತ ಪಾಸ್‌ಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿದ ನಂತರವಷ್ಟೇ ಒಳಗೆ ಬಿಡಲಾಗುತ್ತಿದೆ. ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯ ಉಸ್ತುವಾರಿ ವಹಿಸಿದ್ದಾರೆ. ಮೂರು ರಾಜ್ಯಗಳ ರೈತರ ಪಾಲಿನ ಸಂಜೀವಿನಿಯಾಗಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳ ನವೀಕರಣ ಕಾರ್ಯ ಯಶಸ್ವಿಯಾಗಿ ಮುಗಿದಿದ್ದು, ಇಂದಿನ ಲೋಕಾರ್ಪಣೆ ಕಾರ್ಯಕ್ರಮದ ಮೇಲೆ ಇಡೀ ದಕ್ಷಿಣ ಭಾರತದ ಕಣ್ಣು ನೆಟ್ಟಿದೆ.