ಹಗರಿಬೊಮ್ಮನಹಳ್ಳಿಯಲ್ಲಿ ಸೇತುಬಂಧ ಮಾದರಿ ಪ್ರಶ್ನೆಪತ್ರಿಕೆಯನ್ನು ಬಿಇಒ ಎಸ್.ಎಸ್.ಜಗದೀಶ ಬಿಡುಗಡೆ ಮಾಡಿದರು.
ಹಗರಿಬೊಮ್ಮನಹಳ್ಳಿ: ತಾಲೂಕಿನಲ್ಲಿ ಶಿಕ್ಷಣದ ಗುಣಮಟ್ಟ ಇನ್ನಷ್ಟು ಪರಿಣಾಮಕಾರಿಯಾಗಿಸಲು ‘ಹೊಸ ದಿಕ್ಕು ನವ ಹೆಜ್ಜೆ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸೇತುಬಂಧ ಸಹಕಾರಿಯಾಗಲಿದೆ ಎಂದು ಬಿಇಒ ಎಸ್.ಎಸ್.ಜಗದೀಶ ತಿಳಿಸಿದರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸೇತುಬಂಧ ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೇತುಬಂಧದ ನೈದಾನಿಕ ಹಾಗೂ ಸಾಫಲ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗಿದೆ. ತಾಲೂಕಿನ ಎಲ್ಲ ಶಾಲೆಗಳ ಶಿಕ್ಷಕರಿಗೆ ಉಪಯುಕ್ತವಾಗುವುದರೊಂದಿಗೆ ಶೈಕ್ಷಣಿಕ ರಂಗದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದರು.
ಬಿಆರ್‌ಸಿ ಸಂಪನ್ಮೂಲ ಅಧಿಕಾರಿ ಎಂ.ಎಸ್.ಪ್ರಭಾಕರ ಮಾತನಾಡಿ, ಸಮಗ್ರ ಮೌಲ್ಯಮಾಪನದ ಮೂಲಕ ಮಗುವಿನ ಕಲಿಕೆಯ ಮಟ್ಟವನ್ನು ಗುರುತಿಸಿ ಮುಂದಿನ ತರಗತಿಗೆ ಸನ್ನದ್ಧಗೊಳಿಸುವ ಕಾರ್ಯವನ್ನು ನಾವು ನಿರಂತರವಾಗಿ ಕೈಗೊಳ್ಳುತ್ತೇವೆ. ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವ ಪ್ರಯತ್ನದಲ್ಲಿ ಶಿಕ್ಷಕರ ಸಹಕಾರದಿಂದ ಯಶಸ್ಸು ಕಂಡಿದ್ದೇವೆ. ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡಲಾಗಿದೆ ಸಾಗಿದ್ದೇವೆ ಎಂದರು.
ಯೋಜನೆಯ ಉಸ್ತುವಾರಿಯಾದ ಡಾ.ಪರಮೇಶ್ವರಯ್ಯ ಸೊಪ್ಪಿಮಠ, ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ ಮಂಜುನಾಥ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರ ನಾಯ್ಕ, ಶಿಕ್ಷಕರಾದ ಕೆ.ಗಾಳೆಪ್ಪ, ಎಸ್.ಕೊಟ್ರೇಶ್, ಸಂತೋಷ ಮತ್ತಿತರರು ಇದ್ದರು.