- ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ
ಹೊಸಪೇಟೆ: ಶತಮಾನಗಳ ಇತಿಹಾಸವಿರುವ ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿ ಮತ್ತು ದಾಖಲೆಗಳನ್ನು ಭಾರತದ ಜ್ಞಾನ ಪರಪಂರೆಯನ್ನು ಆದುನಿಕ ತಂತ್ರಜ್ಞಾನದ ಮೂಲಕ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ‘ಜ್ಞಾನ ಭಾರತಂ ಮಿಷನ್’ ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಈ ಯೋಜನೆಯಡಿ ಜಿಲ್ಲೆಯಾದ್ಯಂತ ಇರುವ ಪ್ರಾಚೀನ ಹಸ್ತಪ್ರತಿಗಳು, ಕೈಬರಹದ ಪಠ್ಯಗಳು ಮತ್ತು ಐತಿಹಾಸಿಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಶಾಶ್ವತವಾಗಿ ಸಂರಕ್ಷಿಸುವ ಗುರಿ ಹೊಂದಲಾಗಿದೆ. ದೇಶದ ಅಮೂಲ್ಯ ಜ್ಞಾನ ಸಂಪತ್ತನ್ನು ಒಂದೇ ವೇದಿಕೆಯಡಿ ತಂದು ‘ರಾಷ್ಟ್ರೀಯ ಹಸ್ತಪ್ರತಿ ಭಂಡಾರ’ ನಿರ್ಮಿಸುವುದು ಈ ಮಿಷನ್‌ನ ಮುಖ್ಯ ಉದ್ದೇಶ. ವಿಶೇಷ ಮೊಬೈಲ್ ಅಪ್ಲಿಕೇಶನ್ ಮೂಲಕ ಹಸ್ತಪ್ರತಿಗಳ ಮಾಹಿತಿಯನ್ನು ಅಪ್ಲೋಡ್ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಇದರ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸಮೀಕ್ಷೆಯ ಕ್ಲಸ್ಟರ್ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಹಸ್ತಪ್ರತಿ ಪತ್ತೆ ಹಚ್ಚುವ ಜವಾಬ್ದಾರಿ ಹೊತ್ತಿದೆ. ಸಮೀಕ್ಷೆಯು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿದ್ದು ಹಸ್ತಪ್ರತಿಗಳ ಜಿಯೋಟ್ಯಾಗಿಂಗ್ ಮತ್ತು ಮೆಟಾಡೇಟಾ ದಾಖಲೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೇ ಈ ಕಾರ್ಯವು ವೇಗವಾಗಿ ನಡೆಯುತ್ತಿದೆ. ಈವರೆಗೆ 17 ಜಿಲ್ಲೆಗಳಲ್ಲಿ ಏ.27ರವರೆಗೆ ಒಟ್ಟು 2,13,255 ಹಸ್ತಪ್ರತಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಸ್ತುತ ವಿಜಯನಗರ ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವು ಪ್ರಗತಿಯಲ್ಲಿದೆ. ಈ ಸಮೀಕ್ಷಾ ಪ್ರಗತಿಯು ಮೇ ಅಂತ್ಯದವರೆಗೆ ಮುಂದುವರೆಯಲಿದೆ.
ವಿಜಯನಗರ ಜಿಲ್ಲೆಯ ವ್ಯಾಪ್ತಿಯ ಹಂಪಿ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಪುರತತ್ವ ಸಹಾಯಕ ಡಾ.ಆರ್.ಮಂಜನಾಯ್ಕ, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಅಧಿಕಾರಿ ಶ್ರೀಹರಿ ಮಾಸನೂರು ಸಂಪರ್ಕಿಸಿ ಮಾಹಿತಿ ನೀಡುವ ಮೂಲಕ ಪ್ರಾಚೀನ ಕಾಲದ ಹಸ್ತಪ್ರತಿಗಳು ತಾಳೆಗರಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.