- ರೈತನಿಗಿಂತ ಮಧ್ಯವರ್ತಿಗಳಿಗೇ ಲಾಭ
- ಸ್ಥಳೀಯರಿಗೆ ತಟ್ಟಿದ ಬಿಸಿ
ಹೊಸಪೇಟೆ: ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬಿರು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲಿನ ಬೇಗೆಯಿಂದ ದಾಹ ನೀಗಿಸಿಕೊಳ್ಳಲು ಸಾರ್ವಜನಿಕರು ಎಳನೀರಿನ ಮೊರೆ ಹೋಗುತ್ತಿದ್ದಾರೆ. ಆದರೆ, ಬೇಡಿಕೆ ಹೆಚ್ಚಾದಂತೆ ಎಳನೀರಿನ ದರವೂ ದಿಢೀರನೆ ಗಗನಕ್ಕೇರಿದ್ದು, ಎರಡು ತಿಂಗಳ ಹಿಂದೆ 20-30 ರೂ. ಇದ್ದ ಬೆಲೆ ಇದೀಗ 40-60 ರೂ.ಗೆ ಜಿಗಿದಿದೆ.
ಕಳೆದೆರಡು ವರ್ಷಗಳಿಂದ ಎಳನೀರಿನ ಬೆಲೆ ಏರುತ್ತಲೇ ಸಾಗಿದೆ. ಮೂರು ವರ್ಷಗಳ ಹಿಂದೆ 25 ರೂ.ಗೆ ಲಭ್ಯವಿದ್ದ ಸಾಧಾರಣ ಗಾತ್ರದ ಎಳನೀರು ಈಗ ಶ್ರೀಮಂತರ ಪಾಲಿನ ಪಾನೀಯ ಎಂಬಂತಾಗಿದೆ. ವಿಶೇಷವೆಂದರೆ, ತೆಂಗು ಬೆಳೆಗಾರರಿಗೆ ಪ್ರತಿ ಎಳನೀರಿಗೆ ಸಿಗುತ್ತಿರುವುದು ಕೇವಲ 10 ರಿಂದ 15 ರೂ. ಮಾತ್ರ. ಉಳಿದ ಸಿಂಹಪಾಲು ಮಧ್ಯವರ್ತಿಗಳು ಮತ್ತು ಮಾರಾಟಗಾರರ ಜೇಬು ಸೇರುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಂದ ಹೆಚ್ಚಿನ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಹಾಗೂ ಉತ್ತಮ ದರ ಸಿಕ್ಕಿದ್ದರಿಂದ ವಿಜಯನಗರ ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ನಿತ್ಯ ಲಾರಿಗಟ್ಟಲೆ ಎಳನೀರು ಪೂರೈಕೆಯಾಗುತ್ತಿದೆ. ಇದರಿಂದ ಸ್ಥಳೀಯವಾಗಿ ತೆಂಗಿನಕಾಯಿಗೆ ಅಭಾವ ಸೃಷ್ಟಿಯಾಗಿ, ಬೆಲೆ ಏರಿಕೆಗೆ ಕಾರಣವಾಯಿತು. ಪರಿಣಾಮ, ತೆಂಗಿನಕಾಯಿಗಾಗಿ ಕೆಲವು ರೈತರು ಎಳನೀರು ಕೊಯ್ದು ಮಾಡದೆ ಬಿಟ್ಟಿದ್ದರಿಂದ ಮಾರುಕಟ್ಟೆಯಲ್ಲಿ ಎರಡಕ್ಕೂ ತತ್ವಾರ ಶುರುವಾಗಿದೆ.
ಜಿಲ್ಲೆಯಲ್ಲಿ ಕಬ್ಬಿನ ಜೊತೆಗೆ ತೆಂಗು ಪ್ರಮುಖ ತೋಟಗಾರಿಕೆ ವಾಣಿಜ್ಯ ಬೆಳೆಯಾಗಿ ಸಾವಿರಾರು ಕುಟುಂಬಗಳನ್ನು ಸಲಹುತ್ತಿದೆ. ಜಿಲ್ಲೆಯ ಒಟ್ಟು 60,548 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗಿದೆ. ಪ್ರಸ್ತುತ ತೆಂಗಿನಕಾಯಿಗೆ ಹೋಲಿಸಿದರೆ ಎಳನೀರಿಗೆ ಬಂಪರ್ ಬೇಡಿಕೆ ಬಂದಿದೆ. ಜನವರಿ ಅಂತ್ಯದಲ್ಲೇ ಚಳಿ ಮರೆಯಾಗಿ ಬಿಸಿಲು ಆರಂಭವಾಗಿದ್ದರಿಂದ ಜನರು ಎಳನೀರಿಗೆ ಮುಗಿಬೀಳುತ್ತಿದ್ದಾರೆ. ಇದರಿಂದ ಸಣ್ಣ ಗಾತ್ರದ ಎಳನೀರಿಗೆ 50 ರೂ. ಹಾಗೂ ಸಾಧಾರಣ ಗಾತ್ರದ ಎಳನೀರಿಗೆ 60 ರೂ. ವರೆಗೆ ದರ ನಿಗದಿಪಡಿಸಲಾಗಿದೆ. ಎಳನೀರಿನ ಬೆಲೆ ಏರಿಕೆಯ ಲಾಭ ಮಾತ್ರ ಬೆಳೆಗಾರನಿಗೆ ದಕ್ಕುತ್ತಿಲ್ಲ. ವ್ಯಾಪಾರಿಗಳು ತೋಟದಲ್ಲೇ ರೈತರಿಗೆ ಕೇವಲ 10-15 ರೂ. ನೀಡಿ ಎಳನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳೇ ಕಾರ್ಮಿಕರನ್ನು ಕರೆತಂದು ಕೊಯ್ದು ಮಾಡಿಸಿ ಸಾಗಿಸುತ್ತಿದ್ದಾರೆ. ಕಾರ್ಮಿಕರ ಕೂಲಿ ಹಾಗೂ ಸಾಗಣೆ ವೆಚ್ಚ ಕಳೆದರೂ ವ್ಯಾಪಾರಿಗಳಿಗೆ ಪ್ರತಿ ಎಳನೀರಿಗೆ ಕನಿಷ್ಠ 30 ರೂ. ಲಾಭ ಉಳಿಯುತ್ತಿದೆ. ಆದರೆ, ಬೆವರು ಸುರಿಸಿ ಬೆಳೆದ ರೈತ ಮಾತ್ರ ಅಲ್ಪ ಮೊತ್ತಕ್ಕೆ ತೃಪ್ತಿಪಡುವಂತಾಗಿದೆ.
ಕೈ ಸುಡುತ್ತಿದೆ ನಿಂಬೆಹಣ್ಣಿನ ದರ!
ಎಳನೀರಿನ ಬೆನ್ನಲ್ಲೇ ನಿಂಬೆಹಣ್ಣಿನ ದರವೂ ಗಗನಕ್ಕೇರಿದೆ. ಮಾರುಕಟ್ಟೆಯಲ್ಲಿ ಒಂದು ನಿಂಬೆಹಣ್ಣಿನ ಬೆಲೆ 8-10 ರೂಪಾಯಿ ತಲುಪಿರುವುದು ಗ್ರಾಹಕರಿಗೆ ಶಾಕ್ ನೀಡಿದೆ. ಜಿಲ್ಲೆಯ ಅಂದಾಜು 20 ಹೆಕ್ಟೇರ್‌ನಲ್ಲಿ ನಿಂಬೆ ಬೆಳೆಯಲಾಗುತ್ತಿದ್ದು, ಬೇಸಿಗೆಯಲ್ಲಿ ಇಳುವರಿ ಕುಂಠಿತಗೊಂಡಿದ್ದರಿಂದ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿದೆ. ನೆರೆಯ ಜಿಲ್ಲೆ ಹಾಗೂ ಆಂಧ್ರಪ್ರದೇಶದಿಂದ ನಿಂಬೆಹಣ್ಣು ಅಮದು ಮಾಡಿಕೊಳ್ಳಲಾಗುತ್ತಿದ್ದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ದಾಹ ನೀಗಿಸಲು ಜನರು ನಿಂಬೆ ಶರಬತ್ತಿನ ಮೊರೆ ಹೋಗುತ್ತಿರುವುದರಿಂದ ಬೇಡಿಕೆ ಹೆಚ್ಚಿದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ.