ಕಮಲಾಪುರದಲ್ಲಿ ಮಂಗಳವಾರ ಶಾಸಕ ಎಚ್.ಆರ್.ಗವಿಯಪ್ಪ ಪ್ರವಾಸಿ ಪ್ಲಾಜಾ ಭೂಮಿ ಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದರು. ಕಮಲಾಪುರ ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಕ್ತಿಯಾರ್ ಪಾಷಾ, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ, ಪಿಡಬ್ಲ್ಯೂಡಿ ಎಇಇ ರವಿನಾಯ್ಕ ಇತರರಿದ್ದರು.
- ಶಾಸಕ ಗವಿಯಪ್ಪ ಅವರಿಂದ ಭೂಮಿ ಪೂಜೆ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ, ಇಲ್ಲಿನ ಕಮಾಲಪುರ ಪಟ್ಟಣದಲ್ಲಿ 9.95 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಪ್ರವಾಸಿ ಪ್ಲಾಜಾ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದರು.
ತಾಲೂಕಿನ ಕಮಲಾಪುರದಲ್ಲಿ ಮಂಗಳವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.
ಹಂಪಿಗೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ಪ್ರವಾಸಿ ಪ್ಲಾಜಾ ನಿರ್ಮಾಣದಿಂದ ಪ್ರವಾಸಿಗರಿಗೆ ಒಂದೇ ಸೂರಿನಡಿ ಆಧುನಿಕ ಸೌಲಭ್ಯಗಳು ಸಿಗಲಿವೆ. ಇದು ಸ್ಥಳೀಯ ಪ್ರವಾಸೋದ್ಯಮದ ಬೆಳವಣಿಗೆಗೆ ಹಾಗೂ ಆರ್ಥಿಕತೆಗೆ ಹೊಸ ವೇಗ ನೀಡಲಿದೆ ಎಂದರು.
ಈ ಭವ್ಯ ಪ್ರವಾಸಿ ಪ್ಲಾಜಾದಲ್ಲಿ ಸುಸಜ್ಜಿತ ಮಾಹಿತಿ ಕೇಂದ್ರ, ವಿಶ್ರಾಂತಿ ಗೃಹಗಳು, ವಾಹನ ನಿಲುಗಡೆ ತಾಣ (ಪಾರ್ಕಿಂಗ್), ಶೌಚಾಲಯ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ವಾಣಿಜ್ಯ ಮಳಿಗೆಗಳ ವ್ಯವಸ್ಥೆ ಇರಲಿದೆ. ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.