ಹೊಸಪೇಟೆಯಲ್ಲಿ ಮಂಗಳವಾರ ಇಎಸ್ಐ ಆಸ್ಪತ್ರೆ ಸ್ಥಾಪಿಸುವಂತೆ ಆಗ್ರಹಿಸಿ ಸಂಸದ ಈ.ತುಕಾರಾಮ್ ಅವರಿಗೆ ಮನವಿ ಸಲ್ಲಿಸಿದರು. ಹೂಡಾ ಅಧ್ಯಕ್ಷ ಎಚ್.ಎನ್.ಎಫ್. ಇಮಾಮ್ ನಿಯಾಜಿ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಜಿಲ್ಲ ಅಧ್ಯಕ್ಷ ಅಶ್ವಿನ್ ಕೊತಂಬ್ರಿ, ಕಾರ್ಯದರ್ಶಿ ಕೆ.ರಾಜೇಂದ್ರ, ಪದಾಧಿಯ ರಮೇಶ್ ಗುಪ್ತ, ಅಬ್ದುಲ್ ಹಕ್ ಸೈಟ್ ಇತರರಿದ್ದರು.
- ಸಂಸದ ಈ.ತುಕಾರಾಂ ಅವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದಿಂದ ಮನವಿ
ಹೊಸಪೇಟೆ: ನಗರದಲ್ಲಿ ಸುಸಜ್ಜಿತ ಇಎಸ್ಐ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಆಗ್ರಹಿಸಿ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಪದಾಧಿಕಾರಿಗಳು ಸಂಸದ ಈ.ತುಕಾರಾಮ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ನಾಲ್ಕೈದು ದಶಕಗಳಿಂದ ಕಾರಿಗನೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ಇ.ಎಸ್.ಐ ಆಸ್ಪತ್ರೆಯ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದೆ. ಆದ್ದರಿಂದ, ಅದೇ ಜಾಗದಲ್ಲಿ ಸರ್ಕಾರದಿಂದ ನೂತನ ಸುಸಜ್ಜಿತ ಆಸ್ಪತ್ರೆಯನ್ನು ಮಂಜೂರು ಮಾಡಿಸಿ, ಸಂಸದರ ಅನುದಾನದಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅಗ್ರಹಿಸಿದರು.
ನಗರ ಭೌಗೋಳಿಕವಾಗಿ ಆಯಕಟ್ಟಿನ ಮಧ್ಯಭಾಗದಲ್ಲಿದೆ. ಇಲ್ಲಿ ನೂತನ ಆಸ್ಪತ್ರೆ ನಿರ್ಮಾಣವಾಗುವುದರಿಂದ ಸುತ್ತಮುತ್ತಲಿನ ನೂರಾರು ಕಾರ್ಖಾನೆಗಳ ಕಾರ್ಮಿಕರು, ಸಿಬ್ಬಂದಿ ಹಾಗೂ ವ್ಯಾಪಾರಸ್ಥರಿಗೆ ಚಿಕಿತ್ಸೆ ಪಡೆಯಲು ಗಣನೀಯ ಅನುಕೂಲವಾಗಲಿದೆ. ಕೇವಲ ನಗರ ಮಾತ್ರವಲ್ಲದೆ, ಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರದ ಪ್ರಮುಖ ಕೈಗಾರಿಕಾ ವಲಯದ ಸಾವಿರಾರು ಜನರಿಗೆ ಇದು ವರದಾನವಾಗಲಿದೆ ಎಂದರು.