ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಹಿಂದುಪರ ಸಂಘಟನೆಗಳಿAದ ಪ್ರತಿಭಟನೆ ನಡೆಯಿತು. ಪ್ರಮುಖರಾದ ಜಗದೀಶ್ ಕಮಟಗಿ, ನರಸಿಂಹಮೂರ್ತಿ, ಜಿ.ಕೋಲ್ಲಾಪುರಿ ಇತರರಿದ್ದರು.
- ವಿಶ್ವ ಹಿಂದು ಪರಿಷದ್ ತೀವ್ರ ಆಕ್ರೋಶ
- ಎಡಿಸಿಗೆ ಮನವಿ
ಹೊಸಪೇಟೆ: ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದಿAದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಯಿತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಒಂದಲ್ಲ ಒಂದು ರೀತಿಯಲ್ಲಿ ಹಿಂದೂ ಸಮಾಜಕ್ಕೆ ಕಿರುಕುಳ ನೀಡುತ್ತಲೇ ಬಂದಿದೆ. ಈಗ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ-2020ನ್ನು ಸಡಿಲಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂಬ ವರದಿಗಳು ಆತಂಕಕಾರಿಯಾಗಿವೆ ಎಂದು ಆಗ್ರಹಿಸಲಾಯಿತು.
ರಾಜ್ಯ ಸರ್ಕಾರವು ಗೋವು ಕಳ್ಳರ ಮೇಲಿನ ಅತಿಯಾದ ಪ್ರೀತಿಯಿಂದ, ಅವರಿಗೆ ಬ್ಯಾಂಕ್ ಗ್ಯಾರಂಟಿ ಒದಗಿಸಲು ಕಷ್ಟವಾಗುತ್ತದೆ ಎಂಬ ನೆಪವೊಡ್ಡಿ, ಕೇವಲ ಸಾಲದ ಬಾಂಡ್ ಬರೆದುಕೊಟ್ಟರೆ ಸಾಕು ಎಂಬ ತಿದ್ದುಪಡಿ ತರಲು ಹೊರಟಿದೆ. ಇದು ಪರೋಕ್ಷವಾಗಿ ಸರ್ಕಾರವು ಗೋಕಳ್ಳರೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ನೀಡಿದಂತಿದೆ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಮಾಡಿ ಗೋವು ಕಳ್ಳರಿಗೆ ಸಹಕರಿಸುವ ನೀತಿ ಅನುಸರಿಸುತ್ತಿದೆ. ಅಕ್ರಮ ಗೋವು ಸಾಗಣೆದಾರರಿಗೆ ಅನುಕೂಲ ಮಾಡಿಕೊಡುವ ಈ ತಿದ್ದುಪಡಿಯನ್ನು ತಕ್ಷಣವೇ ಕೈಬಿಡಬೇಕು. ಒಂದು ವೇಳೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಿದರೆ, ಹಿಂದೂ ಸಮಾಜದ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.