ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಡಿಸಿ ಕವಿತಾ ಎಸ್.ಮನ್ನಿಕೇರಿ ಅಧ್ಯಕ್ಷತೆಯಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಹೂವಿನಹಡಗಲಿ: ರೈತರ ಪಹಣಿಗಳಿಗೆ ಆಧಾರ್ ಲಿಂಕ್ ಮಾಡಲಾಗುತ್ತಿದ್ದು, ಕನಿಷ್ಠ ಶೇ.90 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಡಿಸಿ ಕವಿತಾ ಎಸ್.ಮನ್ನಿಕೇರಿ ಸೂಚಿಸಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಸೋಮವಾರ ಮಾತನಾಡಿದರು. ತಾಲೂಕಿನಲ್ಲಿ 1,09,939 ಖಾತೆದಾರರಿದ್ದು, 62,315 ರೈತರ ಪಹಣಿಗೆ ಆಧಾರ್‌ಲಿಂಕ್ ಆಗಿದೆ. ಮುಂದಿನ ಫೆಬ್ರವರಿಯಲ್ಲಿ ಹಾವೇರಿಯಲ್ಲಿ ಸರ್ಕಾರದಿಂದ ಸಮಾವೇಶ ನಡೆಯಲಿದ್ದು, ಆಗ ತಾಲೂಕಿನ ಕಂದಾಯ ಗ್ರಾಮಗಳ 1800 ಜನರಿಗೆ ಹಕ್ಕುಪತ್ರ ನೀಡಲಾಗುವುದು. ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕೆಂದು ತಾಕೀತು ಮಾಡಿದರು.
ತಾಲೂಕಿನ 57 ಹಟ್ಟಿ, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದೆ. ಈ ಪೈಕಿ 38 ಕಂದಾಯ ಗ್ರಾಮಗಳ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ ಹಟ್ಟಿ, ತಾಂಡಗಳು ಕಂದಾಯ ಗ್ರಾಮಗಳಾಗುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಯನ್ನು ಫೆಬ್ರವರಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ತಾಲೂಕಿನಲ್ಲಿ 18,724 ಮರಣ ಹೊಂದಿರುವ ಖಾತೆದಾರರಿದ್ದು, ಇ ಪೌತಿ ಅಭಿಯಾನದಡಿ 2491 ಖಾತೆಗಳ ಹಕ್ಕು ಬದಲಾವಣೆಗೊಂಡಿವೆ. ಪ್ರತಿ ತಿಂಗಳು 2800 ಖಾತೆದಾರರ ಹಕ್ಕು ಬದಲಾವಣೆ ಪೂರ್ಣಗೊಳಿಸಬೇಕು. ತಾಲೂಕಿನಲ್ಲಿ 8806 ಸರ್ಕಾರಿ ಭೂಮಿಯ ಸರ್ವೇ ನಂಬರ್‌ಗಳಿದ್ದು, ಒತ್ತುವರಿ ತೆರವುಗೊಳಿಸಲು ಲ್ಯಾಂಡ್ ಬೀಟ್ ಮೂಲಕ 7282 ಸರ್ವೇ ನಂಬರ್‌ಗಳ ಗಡಿ ಗುರುತು ಮಾಡಲಾಗಿದೆ. ಬಾಕಿ ಜಮೀನಿನ ಸರ್ವೇ ಕಾರ್ಯ ತ್ವರಿತ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಪ್ರತಿದಿನ ಏಳು ಸಾವಿರದಂತೆ ಹಳೆಯ ಕಂದಾಯ ದಾಖಲೆಗಳನ್ನು ಗಣಕೀಕೃತ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು 12 ಸಾವಿರಕ್ಕೆ ಹೆಚ್ಚಿಸಬೇಕು. ರೈತರಿಗೆ ಡಿಜಿಟಲ್ ಸಹಿ ಇರುವ ದಾಖಲೆಗಳನ್ನು ನೀಡಬೇಕು. ತಾಲೂಕು ದಂಡಾಧಿಕಾರಿ ನ್ಯಾಯಾಲಯದಲ್ಲಿ 81 ಕೇಸ್‌ಗಳಿದ್ದು, 90 ದಿನದೊಳಗೆ ಪೂರ್ಣಗೊಳಿಸಬೇಕು. ಭೂ ಮಾಪಕರು ಇಲ್ಲ ಎಂಬ ದೂರುಗಳಿದ್ದು, ಬೇರೆ ತಾಲೂಕುಗಳಿಂದ ಭೂ ಮಾಪಕರನ್ನು ನಿಯೋಜನೆ ಮಾಡಿ ಎಂದು ಡಿಸಿ ಸೂಚನೆ ನೀಡಿದರು.