ಹೊಸಪೇಟೆ ಫ್ರೀಡಂ ಪಾರ್ಕ್ನಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ ನಡೆದ ವಿಶೇಷ ಯೋಗ ಶಿಬಿರದಲ್ಲಿ ತರಬೇತುದಾರರಾದ ಪ್ರೊ.ಎಫ್.ಟಿ.ಹಳ್ಳಿಕೇರಿ, ರಾಜೇಶ್ ಕಾರ್ವಾ ಯೋಗ ತರಬೇತಿ ನೀಡಿದರು. 
ವಿಜಯನಗರ

ಉದ್ಯಾನವನಗಳ ಅಭಿವೃದ್ಧಿಗೆ ಪಣ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಹೊಸಪೇಟೆ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಭರವಸೆ
ಹೊಸಪೇಟೆ: ಸೂಕ್ತ ನಿರ್ವಹಣೆಯಿಂದ ಉದ್ಯಾನಗಳನ್ನು ಮಾದರಿಯಾಗಿಸಬಹುದು ಎಂಬುದಕ್ಕೆ ನಗರದ ಫ್ರೀಡಂ ಪಾರ್ಕ್ ಅತ್ಯುತ್ತಮ ಉದಾಹರಣೆಯಾಗಿದ್ದು, ಇದೇ ಮಾದರಿಯಲ್ಲಿ ನಗರದ ಇತರ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಇಲ್ಲಿನ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಭರವಸೆ ನೀಡಿದ್ದಾರೆ.
ನಗರದ ಫ್ರೀಡಂ ಪಾರ್ಕ್ ಹಿಂಭಾಗದಲ್ಲಿ ನೂತನವಾಗಿ ಸಜ್ಜುಗೊಂಡಿರುವ, ಸೂರ್ಯನಮಸ್ಕಾರದ ಭಂಗಿಯ ಕಂಚಿನ ಪ್ರತಿಮೆಗಳನ್ನೊಳಗೊಂಡ ಉದ್ಯಾನದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ವಿಶೇಷ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.
ನಗರದ ಹೃದಯಭಾಗದಲ್ಲಿರುವ ಶ್ರೀರಾಮುಲು ಉದ್ಯಾನ ಸೇರಿದಂತೆ ಹಲವು ಪಾರ್ಕ್ಗಳನ್ನು ಮುಂದಿನ ದಿನಗಳಲ್ಲಿ ಹಂತ-ಹAತವಾಗಿ ಅಭಿವೃದ್ಧಿಪಡಿಸಿ, ಉತ್ತಮ ನಿರ್ವಹಣೆಗೆ ಒಪ್ಪಿಸುವ ಯೋಜನೆ ಇದೆ. ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಹಣದ ಕೊರತೆಯಾದಾಗ ನಗರಸಭೆಯಿಂದಲೇ 60 ಲಕ್ಷ ರೂ. ಹೊಂದಿಸಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈಗ ನಗರಸಭೆಯ ವಿಶೇಷ ಕಾಳಜಿಯಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಗಳತ್ತ ಬರುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ್ ಮಾತನಾಡಿ, ಆಯುಷ್ ಇಲಾಖೆಯ ಪ್ರೊಟೊಕಾಲ್ ಯೋಗ ಹಾಗೂ ಚಂದ್ರಭೇದನ ಪ್ರಾಣಾಯಾಮದ ತರಬೇತಿ ನೀಡಿದರು. ಸೂರ್ಯನಮಸ್ಕಾರದ 12 ಭಂಗಿಗಳ ಪ್ರತಿಮೆಗಳ ನಡುವೆ 200ಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು. ಈ ನೂತನ ಉದ್ಯಾನದಲ್ಲಿ ಜೂ.22ರಿಂದ ನಿರಂತರ ಯೋಗ ತರಗತಿಗಳು ನಡೆಯಲಿದ್ದು, ವಾಕಿಂಗ್ ಪಾತ್, ಓಪನ್ ಜಿಮ್ ಹಾಗೂ ಸುಸಜ್ಜಿತ ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ, ಬಳ್ಳಾರಿ ಜಿಲ್ಲಾ ಪ್ರಭಾರಿ ರಾಜೇಶ್ ಕಾರ್ವಾ, ಪ್ರಮುಖರಾದ ಶ್ರೀಧರ್, ಶ್ರೀನಿವಾಸ ಮಂಚಿಕಟ್ಟಿ, ವೆಂಕಟೇಶ್ ವಾಸಿ, ಕಟ್ಟಾ ನಂಜಪ್ಪ, ಪ್ರಹ್ಲಾದ್ ಭೂಪಾಳ್, ಶ್ರೀರಾಮ್, ಅಶೋಕ ಚಿತ್ರಗಾರ್, ಶಿವಮೂರ್ತಿ, ಕಳಕಪ್ಪ, ರಾಮಚಂದ್ರ ಕಂಬದ, ಅನಂತ ಜೋಶಿ ಇತರರಿದ್ದರು.