ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಭಾಗದಲ್ಲಿ ಟೋಮಾಟೋ ಬೆಳೆಗೆ ರೋಗಕ್ಕೆ ತುತ್ತಾಗಿರುವುದು. 
ವಿಜಯನಗರ

ಬೆಳೆಗಳಿಗೆ ಚಳಿ ಹೊಡೆತ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಇಳುವರಿ ಮೇಲೆ ಪರಿಣಾಮ
  • ಸಂಕಷ್ಟದಲ್ಲಿ ಬೆಳೆಗಾರ
ಹೊಸಪೇಟೆ: ಈ ಬಾರಿಯ ಬಿಸುತ್ತಿರುವ ಚಳಿ ಕೇವಲ ಜನ ಜೀವನದ ಮೇಲಷ್ಟೇ ಪರಿಣಾಮ ಬೀರಿಲ್ಲ. ಬದಲಿಗೆ ವಿವಿಧ ಬೆಳೆಗಳಿಗೂ ಕಂಟಕವಾಗಿ ಪರಿಣಮಿಸಿದೆ.
ತಾಪಮಾನ ತೀವ್ರ ಕುಸಿತ ಪರಿಣಾಮದಿಂದಾಗಿ ಕಳೆದ ಕೆಲ ದಿನಗಳಿಂದ ತೀವ್ರ ಚಳಿ ಕಾಡಲಾರಂಭಿಸಿದೆ. ರಾತ್ರಿ ವೇಳೆಯಲ್ಲಂತೂ ಚಳಿ, ಇಬ್ಬನಿ ಪ್ರಮಾಣ ಹೆಚ್ಚಾಗುತ್ತಿದ್ದು, ತಾಪಮಾನ ತೀವ್ರವಾಗಿ ಕುಸಿಯಲಾರಂಭಿಸಿದೆ. ಮಧ್ಯಾಹ್ನದ ವೇಳೆ ಬಿಸಿಲಿದ್ದರೂ ಶೀತಗಾಳಿ ಪರಿಣಾಮ ಚಳಿಯಾಗುತ್ತಿದೆ. ಇದು ಮನುಷ್ಯರಷ್ಟೇ ಅಲ್ಲ ಹಲವು ಬೆಳೆಗಳ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ರಾತ್ರಿ ವೇಳೆ ಸಾಕಷ್ಟು ಇಬ್ಬನಿ ಹಾಗೂ ಶೀತಗಾಳಿಯಿಂದಾಗಿ ತರಕಾರಿ ಬೆಳೆಗಳು, ಹೂವಿನ ಬೆಳೆಗಳಿಗೆ ಹಾನಿಯಾಗುತ್ತಿದೆ. ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ಬಗೆಯ ತರಕಾರಿ, ಹೂವಿನ ಬೆಳವಣಿಗೆ, ಇಳುವರಿ ಕುಂಠಿತಗೊಳ್ಳಲಿದೆ. ಇದರಿಂದಾಗಿ ಸಾಮಾನ್ಯವಾಗಿಯೇ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸದ್ಯ ಒಂದು ತಿಂಗಳಿAದ ವಿಜಯನಗರ ಸೇರಿದಂತೆ ರಾಜ್ಯದ ಉತ್ತರ ಭಾಗದಲ್ಲಿ ಕನಿಷ್ಠ ತಾಪಮಾನ 8ರಿಂದ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗುತ್ತಿದೆ. ಇದರಿಂದಾಗಿ ತೀವ್ರ ಚಳಿಯ ಅನುಭವವಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನತೆ ಪರ್ಯಾಯ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಆದರೆ, ಬೆಳೆಗಳನ್ನು ಈ ಚಳಿ, ಇಬ್ಬನಿ, ಶೀತಗಾಳಿಯಿಂದ ರಕ್ಷಣೆ ಮಾಡುವುದು ಹೇಗೆ? ಬಟಾ ಬಯಲಿನಲ್ಲಿ ಬೆಳೆದಿರುವ ಬೆಳೆಗಳು ಶೀತಗಾಳಿ, ಇಬ್ಬನಿಗೆ ಮುದುಡಿ ಹೋಗುತ್ತಿದ್ದು, ಸಹಜವಾಗಿಯೇ ಇಳುವರಿ ಮೇಲೆ ಪರಿಣಾಮ ಬೀರಲಾರಂಭಿಸಿದ್ದು, ರೈತರಿಗೆ ನಷ್ಟವಾಗಲಿದೆ ಎನ್ನುತ್ತಾರೆ ಕೃಷಿ ಹವಾಮಾನ ತಜ್ಞರು.

ಪರಿಹಾರವೇನು ?

ಹಗಲಿನ ತಾಪಮಾನವು ಸೌಮ್ಯವಾಗಿದ್ದರೂ, ಮುಂಜಾನೆ ಮತ್ತು ಸಂಜೆ ತಡವಾಗಿ ಬರುವ ಶೀತವು ಬೆಳೆ ಬೆಳವಣಿಗೆ, ಹಣ್ಣಿನ ರಚನೆ ಮತ್ತು ಜಾನುವಾರು ಹಾಗೂ ಕೋಳಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರೈತರು ತಮ್ಮ ಬೆಳೆಗಳು ಮತ್ತು ಪ್ರಾಣಿಗಳನ್ನು ರಕ್ಷಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿಗೆ, ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಮತ್ತು ಶೀತದ ಒತ್ತಡವನ್ನು ಕಡಿಮೆ ಮಾಡಲು ಒಣಹುಲ್ಲಿನ ಅಥವಾ ಒಣ ಎಲೆಗಳಿಂದ ಹಸಿಗೊಬ್ಬರ ಹಾಕುವಂತೆ ತಜ್ಞರು ಸಲಹೆ ನೀಡಿದ್ದಾರೆ. ಬೇರುಗಳಿಗೆ ಹಾನಿಯಾಗದಂತೆ ತಡೆಯಲು ಸಂಜೆ ತಡವಾಗಿ ನೀರು ಹಾಯಿಸುವ ಬದಲು ಬೆಳಗ್ಗೆನೀರು ಹರಿಸುವುದು ಸೂಕ್ತ. ತೋಟದ ಬೆಳೆಗಳನ್ನು ಸಾಕಷ್ಟು ಮಣ್ಣಿನ ತೇವಾಂಶದೊAದಿಗೆ ನಿರ್ವಹಿಸಬೇಕು ಮತ್ತು ಗಾಳಿತಡೆಗಳು ಅಥವಾ ನೆರಳು ಪರದೆಗಳು ಎಳೆಯ ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಜಾನುವಾರುಗಳಿಗೆ ಬೆಚ್ಚಗಿನ ಆಶ್ರಯಗಳು, ಒಣ ಹಾಸಿಗೆ ಮತ್ತು ಪೋಷಕಾಂಶ ಭರಿತ ಮೇವನ್ನು ಒದಗಿಸಬೇಕು, ಆದರೆ ತೀತ ಸಂಬAಧಿತ ಒತ್ತಡವನ್ನು ತಡೆಗಟ್ಟಲು ಕೋಳಿ ಶೆಡ್‌ಗಳನ್ನು ನಿರೋಧಿಸಬೇಕು. ಈ ಅವಧಿಯಲ್ಲಿ ರೇಷ್ಮೆ ಹುಳು ಸಾಕಣೆಗೆ ವಿಳಂಬವಾದ ಗೂಡು ರಚನೆಯನ್ನು ತಪ್ಪಿಸಲು ಎಚ್ಚರಿಕೆಯ ತಾಪಮಾನ ನಿರ್ವಹಣೆಯ ಅಗತ್ಯವಿದೆ ಎಂದು ಕೃಷಿ ತಜ್ಞರ ಸಲಹೆಯಾಗಿದೆ.
"

ಚಳಿಯಿಂದ ತಾಪಮಾನ ಕುಸಿತಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಬೆಳೆಗಳ ರಕ್ಷಣೆ ಸವಾಲಾಗಿದೆ. ಇಂಥ ವೇಳೆಗಳಲ್ಲಿ ಬೆಳೆಗಾರರು ತಜ್ಞರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುವುದು ಸೂಕ್ತ.