ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅವರ ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಭೇಟಿಯಾಗಿರುವ ಚಿತ್ರ 
ವಿಜಯನಗರ

ಸಿಎಂ ಡಿ.ಕೆ.ಶಿ-ಆನಂದ್ ಸಿಂಗ್ ಭೇಟಿ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ವಿಜಯನಗರ ರಾಜಕೀಯದಲ್ಲಿ ಹೊಸ ಸಂಚಲನ
ಹೊಸಪೇಟೆ: ಮಾಜಿ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ಹಾಗೂ ವಿಜಯನಗರ ಜಿಲ್ಲಾ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಇಬ್ಬರೂ ನಾಯಕರು ಅತ್ಯಂತ ಆತ್ಮೀಯವಾಗಿ ಕೆಲಕಾಲ ಗೌಪ್ಯ ಮಾತುಕತೆ ನಡೆಸಿದ್ದು, ಈ ಭೇಟಿಯ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಭೇಟಿಯ ನಿಖರ ಉದ್ದೇಶವೇನು ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ರಾಜಕೀಯ ಪಡಸಾಲೆಯಲ್ಲಿ ಹಲವು ಕುತೂಹಲಕಾರಿ ಲೆಕ್ಕಾಚಾರಗಳು ಶುರುವಾಗಿವೆ. ಮುಂಬರುವ 2028ರ ವಿಧಾನಸಭಾ ಚುನಾವಣೆ ಹಾಗೂ ವಿಜಯನಗರ ಕ್ಷೇತ್ರದ ಮುಂದಿನ ರಾಜಕೀಯ ಸಮೀಕರಣಗಳ ಕುರಿತಾಗಿಯೇ ಈ ಮಹತ್ವದ ಚರ್ಚೆ ನಡೆದಿದೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ವಿಜಯನಗರದಲ್ಲಿ ಹೊಸ ಲೆಕ್ಕಾಚಾರ

ವಿಜಯನಗರ ಜಿಲ್ಲೆಯಲ್ಲಿ ಆನಂದ್ ಸಿಂಗ್ ಅವರಿಗೆ ತಮ್ಮದೇ ಆದ ಬಲಿಷ್ಠ ಬೆಂಬಲಿಗರ ಪಡೆಯಿದೆ ಮತ್ತು ಕ್ಷೇತ್ರದ ರಾಜಕಾರಣದ ಮೇಲೆ ದೀರ್ಘಕಾಲದ ಹಿಡಿತವಿದೆ. ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕೀಯದಿಂದ ಕೊಂಚ ಅಂತರ ಕಾಯ್ದುಕೊಂಡAತೆ ಕಂಡುಬAದಿದ್ದ ಸಿಂಗ್, ಈಗ ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿರುವುದು ಸ್ಥಳೀಯ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಇದು ಕೇವಲ ಸೌಜನ್ಯದ ಭೇಟಿಯೋ ಅಥವಾ ಮನೆ ವಾಪಸಾತಿಯ ಮುನ್ಸೂಚನೆಯೋ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿವೆ.
==ಮುಂದಿನ ನಡೆ ಏನು?==
ಈ ಭೇಟಿಯು ವಿಜಯನಗರ ಜಿಲ್ಲಾ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಪಾಳೆಯದಲ್ಲಿ ಹೊಸ ತಲ್ಲಣಕ್ಕೆ ಕಾರಣವಾಗಿದೆ. ಆನಂದ್ ಸಿಂಗ್ ಅವರ ಮುಂದಿನ ರಾಜಕೀಯ ನಡೆ ಯಾವ ದಿಕ್ಕಿನಲ್ಲಿರಲಿದೆ? ಕ್ಷೇತ್ರಕ್ಕೆ ಹೊಸ ನಾಯಕತ್ವದ ರೂಪುರೇಷೆ ಸಿಗಲಿದೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಈ ಭೇಟಿ ಗೌಪ್ಯವಾಗಿದ್ದರೂ, ವಿಜಯನಗರ ರಾಜಕೀಯದ ಚದುರಂಗದಾಟದಲ್ಲಿ ಈ ಭೇಟಿ ಮಹತ್ವದ ತಿರುವು ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.