ತುಂಗಭದ್ರಾ ಜಲಾಶಯದಲ್ಲಿ ನಡೆಯುತ್ತಿರುವ ಚೈನ್ ಅಳವಡಿಕೆ ಕಾರ್ಯ.
- ತುಂಗಭದ್ರಾ ಜಲಾಶಯದ ಸುರಕ್ಷತೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮ/ ಜೂನ್ 15ಕ್ಕೆಲ್ಲ ಪೂರ್ಣ
ಹೊಸಪೇಟೆ: ತುಂಗಭದ್ರಾ ಜಲಾಶಯದ ಮುನ್ನೆಚ್ಚರಿಕೆ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿರುವ ಕ್ರಸ್ಟ್ ಗೇಟ್‌ಗಳ ಹೊಸ ಚೈನ್ ಬದಲಿಸುವ ಪ್ರಕ್ರಿಯೆ ಅತ್ಯಂತ ವೇಗ ಪಡೆದಿದ್ದು, ಬುಧವಾರದ ವೇಳೆಗೆ ಒಟ್ಟು 12 ಗೇಟ್‌ಗಳಿಗೆ ಯಶಸ್ವಿಯಾಗಿ ಚೈನ್‌ಗಳನ್ನು ಅಳವಡಿಸಲಾಗಿದೆ.
ಇತ್ತೀಚಿನ ತಾಂತ್ರಿಕ ಅಡಚಣೆಗಳ ಹಿನ್ನೆಲೆಯಲ್ಲಿ ಜಲಾಶಯದ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ, ಜಲಾಶಯದ ಆವರಣಕ್ಕೆ ಒಟ್ಟು 22 ಹೊಸ ಚೈನ್‌ಗಳು ಈಗಾಗಲೇ ಬಂದು ತಲುಪಿದ್ದು, ಯುದ್ಧೋಪಾದಿಯಲ್ಲಿ ಕೆಲಸ ಸಾಗುತ್ತಿದೆ.
ಹಗಲಿರುಳು ಶ್ರಮಿಸುತ್ತಿರುವ ತಾಂತ್ರಿಕ ತಂಡ ಅತ್ಯಂತ ಎಚ್ಚರಿಕೆಯಿಂದ ಮತ್ತು ನಿಖರತೆಯಿಂದ ಈ ದುರಸ್ತಿ ಕಾರ್ಯವನ್ನು ನಿರ್ವಹಿಸುತ್ತಿದೆ.
2024ರ ಆ.10ರಂದು ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್ ತುಂಡಾಗಿಯೇ ದುರಂತ ನಡೆದು ಹೋಗಿತ್ತು. ನಂತರ ದಿನಗಳಲ್ಲಿ ತಜ್ಞರ ತಂಡ ಸಲಹೆಯಂತೆ ಗೇಟ್ ಗಳ ಬದಲಾವಣೆಗೆ 52 ಕೋಟಿ ರೂ.ಗೆ ವೆಚ್ಚದಲ್ಲಿ ಎಲ್ಲ ಗೇಟ್ ಗಳ ಬದಲಾವಣೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆ 5.8 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಚೈನ್ ಬದಲಾವಣೆಗೆ ಕಾರ್ಯ ಚುರುಕಾಗಿದೆ.
ಹೊಸ ಕ್ರೆಸ್ಟ್ ಗೇಟ್ ಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ತುಂಗಭದ್ರಾ ಆಡಳಿತ ಮಂಡಳಿ(ಟಿಬಿಬಿ)ಯಿಂದ ಸಿದ್ದತೆ ನಡೆದಿದೆ. ಕರ್ನಾಟಕ, ಆಂದ್ರ, ತೆಲಂಗಾಣ ರಾಜ್ಯಗಳ ಜನಪ್ರತಿನಿಧಿಗಳ ಒಂದೇ ದಿನಾಂಕ ಸಿಗುತ್ತಲ್ಲ. ಇದೇ ತಿಂಗಳು ಅಥವ ಮುಂದಿನ ತಿಂಗಳು ದಿನಾಂಕ ಸಿಕ್ಕಿದ ಕೂಡಲೇ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ ಅಧಿಕಾರಿಗಳು ತಿಳಿಸಿದರು.
ಜೂನ್ 15ಕ್ಕೆ ಪೂರ್ಣ ಸಾದ್ಯತೆ
ಇಲ್ಲಿಯವರೆಗೆ 12 ಕ್ರಸ್ಟ್ ಗೇಟ್‌ಗಳಿಗೆ ಚೈನ್ ಅಳವಡಿಕೆ ಪೂರ್ಣವಾಗಿದೆ. ಪ್ರಸ್ತುತ 4 ಗೇಟ್‌ಗಳಿಗೆ ಚೈನ್ ಅಳವಡಿಸುವ ಪ್ರಕ್ರಿಯೆ ಚುರುಕಿನಿಂದ ಸಾಗಿದೆ. ಈಗಾಗಲೇ ಬಂದಿಳಿದಿರುವ ಉಳಿದ ಚೈನ್‌ಗಳನ್ನು ಸಹ ಹಂತ-ಹಂತವಾಗಿ, ವ್ಯವಸ್ಥಿತವಾಗಿ ಅಳವಡಿಸಲು ತಾಂತ್ರಿಕ ತಂಡ ಸಜ್ಜಾಗಿದೆ. ಜೂನ್ 15ಕ್ಕೆಲ್ಲ ಚೈನ್ ಅಳವಡಿಕೆ ಕಾರ್ಯ ಮುಗಿಯುವ ಸಾದ್ಯತೆ ಇದೆ. ಆದ್ದರಿಂದ ದಿನಕ್ಕೆ ಎರಡು ಗೇಟ್ ಚೈನ್ ಅಳವಡಿಕೆಗೆ ಕಾರ್ಯ ನಡೆಸಲಾಗುತ್ತಿದೆ. ಜಲಾಶಯದಲ್ಲಿ ನೀರಿನ ಒತ್ತಡ ನಿರ್ವಹಣೆ ಹಾಗೂ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾಗದಂತೆ ತಡೆಯಲು ಈ ಸರಣಿ ದುರಸ್ತಿ ಕಾರ್ಯ ಹಮ್ಮಿಕೊಳ್ಳಲಾಗಿದೆ.
"
ಜಲಾಶಯದಲ್ಲಿ 12 ಗೇಟ್ ಗಳಿಗೆ ಚೈನ್ ಅಳವಡಿಕೆ ಆಗಿದೆ. ಜೂನ್ 15ಕ್ಕೆಲ್ಲ ಚೈನ್ ಅಳವಡಿಕೆ ಕಾರ್ಯ ಮುಗಿಯಲಿದೆ. ಮೂರು ರಾಜ್ಯಗಳ ಜನಪ್ರತಿನಿಧಿಗಳ ದಿನಾಂಕ ಸಿಕ್ಕ ನಂತರ ಹೊಸ ಗೇಟ್ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
— ಒ.ಆರ್.ಕೆ.ರೆಡ್ಡಿ, ಟಿಬಿಬಿ ಕಾರ್ಯದರ್ಶಿ, ಹೊಸಪೇಟೆ