ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ರೈತ ಸಂಘದ ಮುಖಂಡರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಲ್ಲನಗೌಡ ಕೇಳೂರು, ಈರಣ್ಣ ಗುಡಿಹಾಳ, ಬಸನಗೌಡ ಹುಡೇದ, ಬಸನಗೌಡ ಸಾನಬಾಳ, ಬಸವರಾಜ ಕಲಕೇರಿ, ಕುಪ್ಪಣ್ಣ ಇತರರಿದ್ದರು.
ಲಿಂಗಸುಗೂರು : ರಾಜ್ಯ ಸರ್ಕಾರ ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ ರೈತ ಸಂಘದ ಮುಖಂಡರು ಸೋಮವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿದರು.
ವಿದ್ಯುತ್ ಖಾಸಗೀಕರಣದಿಂದ ರೈತರು ಸಂಕಷ್ಟ ಅನುಭವಿಸಬೇಕಾಗುತ್ತದೆ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು ರೈತರಿಗೆ ಇದರಿಂದ ಅನುಕೂಲವಾಗಿದೆ. ಖಾಸಗೀಕರಣಗೊಳಿಸಿದರೆ ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಬಡ ಕುಟುಂಬಗಳಿಗೆ ಅನುಕೂಲವಾಗಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಮುಂತಾದ ಯೋಜನೆಗಳು ಸ್ಥಗಿತಗೊಂಡು ವಿದ್ಯುತ್ ಬಿಲ್ ಕಟ್ಟುವ ಪರಿಸ್ಥಿತಿ ಬಂದೊದಗುತ್ತದೆ. ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಅನುಮತಿ ನೀಡಬಾರದು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಸೂರ್ಯಕಾಂತಿ ಬೆಳೆಗೆ 3,700 ದಿಂದ 8,343ರೂ.ನಂತೆ ಘೋಷಣೆ ಮಾಡಿದ್ದರಿಂದ ರೈತರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ಮಾಡಿದ್ದಾರೆ. ಕೆಲ ಕಂಪನಿಯ ಸೂರ್ಯಕಾಂತಿ ಬೀಜಗಳು ಕಳಪೆಯಾಗಿದ್ದು ರೈತರು ತೊಂದರೆಗೆ ಒಳಗಾಗಿದ್ದಾರೆ.
ಪ್ರತಿ ಎಕರೆಗೆ 5,000 ದಿಂದ 6,000 ರೂ. ಖರ್ಚು ಮಾಡಿ ಬಿತ್ತಿದ್ದಾರೆ. ಕಾರಣ ಕೃಷಿ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಳಪೆ ಬೀಜ ಬಿತ್ತನೆ ಮಾಡಿದ ಪ್ರದೇಶ ಗುರುತಿಸಿ ಬಿತ್ತನೆ ಬೀಜ ವಿತರಿಸಿದ ಕಂಪನಿಗಳಿಗೆ ದಂಡ ವಿಧಿಸಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.