ಹೊಸಪೇಟೆ ಡಿಎಚ್ ಒ ಕಚೇರಿ ಆವರಣಲ್ಲಿ ಶನಿವಾರ ವಿಶ್ವ ಜನಸಂಖ್ಯೆ ದಿನಾಚರಣೆ ನಿಮಿತ್ತ ಜಾಗೃತಿ ಜಾಥಾಕ್ಕೆ ಶನಿವಾರ ಡಿಎಚ್‌ಒ ಡಾ.ಲಿಂಗರಾಜು ಚಾಲನೆ ನೀಡಿದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಜಂಬಯ್ಯ ನಾಯಕ, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವಿನಯ್, ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರಾಧಿಕಾ, ಕ್ಷಯರೋಗ ನಿರ್ಮೂಲನಾಧಿಕಾರಿ ಭಾಸ್ಕರ್, ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನ ಗೌಡ ಇತರರಿದ್ದರು.
- ಜನಸಂಖ್ಯೆ ನಿಯಂತ್ರಣ ಜಾಗೃತಿ ಜಾಥಾದಲ್ಲಿ ಡಿಎಚ್‌ಒ ಡಾ.ಲಿಂಗರಾಜು ಅಭಿಪ್ರಾಯ
ಹೊಸಪೇಟೆ: ದೇಶದಲ್ಲಿ ಜನಸಂಖ್ಯೆ ನಿಯಂತ್ರಣದಿAದ ಮಾತ್ರ ಆರೋಗ್ಯವಂತ ಸಮಾಜ ಹಾಗೂ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಡಿಎಚ್‌ಒ ಡಾ.ಲಿಂಗರಾಜು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಡಿಎಚ್ ಒ ಕಚೇರಿ ಆವರಣಲ್ಲಿ ಆಯೋಜಿಸಲಾಗಿದ್ದ ವಿಶ್ವ ಜನಸಂಖ್ಯೆ ದಿನಾಚರಣೆ ನಿಮಿತ್ತ ಜನಸಂಖ್ಯೆ ನಿಯಂತ್ರಣ ಜಾಗೃತಿ ಜಾಥಾಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಈ ಅಭಿಯಾನದ ಮೂಲಕ ನಿರಂತರವಾಗಿ ಜನಸಂಖ್ಯಾ ನಿಯಂತ್ರಣ ಹಾಗೂ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸುರಕ್ಷಿತ ಸಮಯದಲ್ಲಿ ಗರ್ಭಧಾರಣೆ ಹಾಗೂ ಒಂದು ಮಗುವಿನಿಂದ ಮತ್ತೊಂದು ಮಗುವಿನ ಜನನದ ನಡುವೆ ಕನಿಷ್ಠ 3 ವರ್ಷಗಳ ಆರೋಗ್ಯಕರ ಅಂತರ ಕಾಯ್ದುಕೊಳ್ಳುವುದು ತಾಯಿ-ಮಗು ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಅತ್ಯಂತ ಅಗತ್ಯವಾಗಿದೆ. ಅನಗತ್ಯ ಗರ್ಭಧಾರಣೆಯಿಂದ ಭವಿಷ್ಯದಲ್ಲಿ ತಾಯಂದಿರು ಮತ್ತು ಮಕ್ಕಳಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು ಎಂದರು.
ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಆರೋಗ್ಯ ಇಲಾಖೆಯಲ್ಲಿ ಲಭ್ಯವಿರುವ ಲೂಪ್ (ಒಂಕಿ) ವ್ಯವಸ್ಥೆ, ಚುಚ್ಚುಮದ್ದು ಹಾಗೂ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿಕೊಳ್ಳುವ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬಹುದು. ಕುಟುಂಬ ಯೋಜನೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ಪುರುಷರಲ್ಲೂ ಸುರಕ್ಷಿತ ಸಂತಾನಹರಣ ಚಿಕಿತ್ಸಾ ವಿಧಾನಗಳಿದ್ದು, ಮಹಿಳೆಯರ ಆರೋಗ್ಯದ ಹಿತದೃಷ್ಟಿಯಿಂದ ಪುರುಷರು ಸಹ ಈ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು" ಎಂದು ಡಿಎಚ್‌ಒ ಸಲಹೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಅಲ್ಲಿಂದ ಹೊರಟ ಜಾಥಾವು ಪುಣ್ಯಮೂರ್ತಿ ಸರ್ಕಲ್, ಬಸ್ ನಿಲ್ದಾಣ, ಡಾ. ಪುನೀತ್ ರಾಜ್‌ಕುಮಾರ್ ಸರ್ಕಲ್, ಅಂಬೇಡ್ಕರ್ ಸರ್ಕಲ್ ಹಾಗೂ ದೊಡ್ಡ ಮಸೀದಿ ಮಾರ್ಗವಾಗಿ ಚಲಿಸಿ, ಪುನಃ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಮುಕ್ತಾಯಗೊಂಡಿತು.