ಹಂಪಿಯಲ್ಲಿ ಬ್ರೌನ್ ರಾಕ್ ಚಾಟ್ ಪತ್ತೆ. 
ವಿಜಯನಗರ

ಹಂಪಿಯಲ್ಲಿ ಬ್ರೌನ್ ರಾಕ್ ಚಾಟ್ ಪತ್ತೆ

ಮಂಜುನಾಥ
ಹೊಸಪೇಟೆ: ಅಪರೂಪದ ಕಂದು ಬಂಡೆ ಸಿಳ್ಳಾರ ಬ್ರೌನ್ ರಾಕ್ ಚಾಟ್ ಹಂಪಿಯಲ್ಲಿ ಪತ್ತೆಯಾಗಿದೆ.
ಮೂಲತಃ ಉತ್ತರ ಹಾಗೂ ಮಧ್ಯ ಭಾರತದ ಆವಾಸಸ್ಥಾನ ಹೊಂದಿರುವ ಈ ಪಕ್ಷಿಯು ಇತ್ತೀಚಿಗೆ ಕರ್ನಾಟಕದ ಎರಡು ಕಡೆ ಕಾಣಿಸಿದ್ದು, ಇದೀಗ ಹಂಪಿಯಲ್ಲಿ ಪಕ್ಷಿ ಪ್ರೇಮಿಗಳಿಗೆ ಗೋಚರಿಸಿ ಅಚ್ಚರಿ ಮೂಡಿಸಿದೆ. ಪಂಪಯ್ಯಸ್ವಾಮಿ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ತಂಡವು ಹಂಪಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಅಚ್ಯುತರಾಯ ದೇಗುಲ ಸ್ಮಾರಕಗಳ ಮೇಲೆ ಅತ್ತಿಂದಿತ್ತ ಓಡಾಡುವುದನ್ನು ಕಂಡು ಸಬ್ಯಸಾಚಿ ರಾಯ್ ಅವರು ತಮ್ಮ ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ.
ಪಕ್ಷಿಯು ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತದೆ. ಇದಕ್ಕೂ ಮೊದಲು ಈ ಪಕ್ಷಿಯನ್ನು ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳೆಮಠ ಅವರು ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೆಗುಲದ ಬಳಿ ಪತ್ತೆ ಹಚ್ಚಿದ್ದರು. ಪಕ್ಷಿ ಛಾಯಾಗ್ರಾಹಕ ರಮೇಶ ದೇಸಾಯಿ ಅವರು ವಿಜಯಪುರದಲ್ಲೂ ಸೆರೆಹಿಡಿದಿದ್ದರು. ಇದೀಗ ಹಂಪಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇಲ್ಲಿಯೇ ಸಂತಾನೋತ್ಪತ್ತಿ ನಡೆಸಿ ಈ ಭಾಗದಲ್ಲಿಯೇ ಉಳಿದುಕೊಂಡುಬಿಟ್ಟಿದೆ ಎಂದು ಪಂಪಯ್ಯಸ್ವಾಮಿ ತಿಳಿಸಿದ್ದಾರೆ.