ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ವೈದ್ಯಾಧಿಕಾರಿಗಳ ಸಭೆ ನಡೆಸಿದರು. ಡಿಎಚ್ಒ ಡಾ. ಎಲ್.ಆರ್. ಶಂಕರ್ ನಾಯ್ಕ ಇದ್ದರು.
- ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ
ಹೊಸಪೇಟೆ: ಜಿಲ್ಲೆಯಲ್ಲಿ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತಾಯಿ ಮತ್ತು ಶಿಶು ಮರಣ ಕುರಿತ ಪರಾಮರ್ಶನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 9 ತಾಯಿ ಮರಣ ಮತ್ತು 3 ಶಿಶು ಮರಣಗಳು ಸಂಭವಿಸಿವೆ. ಆರೋಗ್ಯದ ವಿಷಯದಲ್ಲಿ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಕರ್ತವ್ಯದ ಅವಧಿಯಲ್ಲಿ ಯಾವುದೇ ಆಲಸ್ಯ ತೋರದೆ, ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಜೀವ ಉಳಿಸುವ ಕೆಲಸವಾಗಬೇಕು. ಚಿಕಿತ್ಸೆಯಲ್ಲಿ ಲೋಪದೋಷಗಳಾದರೆ ಸಂಬAಧಪಟ್ಟ ವೈದ್ಯಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತುಕ್ರಮ ಜರುಗಿಸಲಾಗುವುದು.
ಔಷಧ ಹಾಗೂ ಚುಚ್ಚುಮದ್ದು ನೀಡುವ ಮುನ್ನ ಅವದಿ ಮುಗಿದ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸ್ಥಳೀಯವಾಗಿ ಚಿಕಿತ್ಸೆ ಅಸಾಧ್ಯವೆನಿಸಿದರೆ ತ್ವರಿತವಾಗಿ ಉನ್ನತ ಆಸ್ಪತ್ರೆಗೆ ಶಿಫಾರಸ್ಸು ಮಾಡಬೇಕು. ಗ್ರಾಮೀಣ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಎಎನ್‌ಎಂಗಳು ತಳಮಟ್ಟದಲ್ಲಿ ಹೈ-ರಿಸ್ಕ್ ಗರ್ಭಿಣಿಯರನ್ನು ಗುರುತಿಸಿ ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಬೇಕು. ಸಾರ್ವಜನಿಕರು ಸಹ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಡಿಎಚ್ಒ ಡಾ. ಎಲ್.ಆರ್. ಶಂಕರ್ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ವಿನಯ್, ಕ್ಷಯರೋಗ ನಿರ್ಮೂಲನ ಅಧಿಕಾರಿ ಡಾ,ಭಾಸ್ಕರ್, ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ರಾಧಿಕಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಖ ನಾಯ್ಕ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸತೀಶ್ ಚಂದ್ರ ಇತರರಿದ್ದರು.