ರಾಜು 
ವಿಜಯನಗರ

ಹಿನ್ನೀರಿನಲ್ಲಿ ಮುಳುಗಿದ್ದ ಮತ್ತೊಬ್ಬ ಯುವಕರ ಶವ ಪತ್ತೆ

ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿ ಸಮೀಪದ ತುಂಗಭದ್ರಾ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರು ಯುವಕರ ಪೈಕಿ, ರಾಜು ಎಂಬ ಮತ್ತೊಬ್ಬ ಯುವಕನ ಮೃತದೇಹ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ.
ಕಳೆದ ಮಂಗಳವಾರ ಮಧ್ಯಾಹ್ನ ಯಮನೂರಪ್ಪ, ಅಜ್ಜಪ್ಪ ಹಾಗೂ ರಾಜು ಎಂಬ ಮೂವರು ಯುವಕರು ಹಿನ್ನೀರಿನಲ್ಲಿ ಬುಟ್ಟಿ (ತೆಪ್ಪ) ಮೂಲಕ ಮೀನು ಹಿಡಿಯಲು ತೆರಳಿದ್ದರು. ಈ ವೇಳೆ ಬೀಸಿದ ಭಾರಿ ಬಿರುಗಾಳಿಗೆ ಸಿಲುಕಿ ತೆಪ್ಪ ಪಲ್ಟಿಯಾಗಿ ಮೂವರೂ ನೀರುಪಾಲಾಗಿದ್ದರು.
ಘಟನೆ ನಡೆದ ಮರುದಿನ ಬುಧವಾರ ಯಮನೂರಪ್ಪ, ಗುರುವಾರ ಅಜ್ಜಪ್ಪ ಅವರ ಮೃತದೇಹ ಪತ್ತೆಯಾಗಿತ್ತು. ಶುಕ್ರವಾರವೂ ಮುಂದುವರಿದ ಶೋಧ ಕಾರ್ಯದ ವೇಳೆ ಬೆಳಿಗ್ಗೆ ರಾಜು ಅವರ ಮೃತದೇಹವೂ ಪತ್ತೆಯಾಗುವ ಮೂಲಕ ಮೂರು ದಿನಗಳ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಬದುಕಿ ಬಾಳಬೇಕಿದ್ದ ಮೂವರು ಯುವಕರು ಅಕಾಲಿಕ ಸಾವಿಗೀಡಾಗಿರುವುದು ಕುಟುಂಬಸ್ಥರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಸ್ಥಳೀಯ ಅಗ್ನಿಶಾಮಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಉಡುಪಿಯ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ, ಸ್ಥಳೀಯ ಮೀನುಗಾರರು ಹಾಗೂ ಪೊಲೀಸರ ಸತತ ಪರಿಶ್ರಮದಿಂದ ಶೋಧ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ತಹಸೀಲ್ದಾರ್ ಆರ್.ಕವಿತಾ ತಿಳಿಸಿದ್ದಾರೆ.