ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು. 
ವಿಜಯನಗರ

ರಸ್ತೆ ರೋಖೋ ಬಿಜೆಪಿ ಕಾರ್ಯಕರ್ತರ ಬಂಧನ, ಬಿಡುಗಡೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಹೊಸಪೇಟೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ನಗರದ ತಹಸೀಲ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸ್ಥಳದಲ್ಲಿ ಭಾರೀ ಹೈಡ್ರಾಮಾ ಸೃಷ್ಟಿಯಾಯಿತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ನೂರಾರು ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಯಲ್ಲಿ ರಸ್ತೆ ರೋಖೋ ಚಳವಳಿಗೆ ಮುಂದಾದರು. ಈ ವೇಳೆ ಸಂಚಾರ ದಟ್ಟಣೆ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಧರಣಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ-ನೂಕಾಟ ನಡೆಯಿತು.
ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ರಸ್ತೆಯಲ್ಲೇ ಕುಳಿತಿದ್ದ ಕಾರ್ಯಕರ್ತರನ್ನು ಬಲವಂತವಾಗಿ ಎತ್ತಿ ಎರಡು-ಮೂರು ಪೊಲೀಸ್ ವಾಹನಗಳಲ್ಲಿ ತುಂಬಿಕೊಂಡು ಠಾಣೆಗೆ ಕರೆದೊಯ್ದರು. ಈ ಸಂದರ್ಭದಲ್ಲೂ ಸರ್ಕಾರದ ವಿರುದ್ಧ ಘೋಷಣೆಗಳು ಮುಗಿಲುಮುಟ್ಟಿದವು. ನಂತರ ಕಾರ್ಯಕಾರ್ತರನ್ನು ಬಿಡುಗಡೆ ಮಾಡಿದರು.
ಅದಕ್ಕೂ ಮುನ್ನ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ್ ರೆಡ್ಡಿ, ಹಗರಣದಲ್ಲಿ ಹೆಸರು ಸಚಿವ ನಾಗೇಂದ್ರ ಅವರದ್ದಾದರೆ, ಲೂಟಿಯಾದ ಹಣ ಹೋಗಿರುವುದು ಎಲ್ಲಿಗೆ? ಆ ಹಣ ನೇರವಾಗಿ ರಾಹುಲ್ ಗಾಂಧಿ ಅವರ ಮನೆಗೆ ಹೋಗಿದೆ! ಅದಕ್ಕಾಗಿಯೇ ಇಂತಹ ಭ್ರಷ್ಟರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದೀರಿ. ನಿಮ್ಮ ಈ ಭ್ರಷ್ಟಾಚಾರದ ಕಾರಣದಿಂದಾಗಿಯೇ ಇಂದು ಒಂದು ಅಮಾಯಕ ಜೀವ ಬಲಿಯಾಗಿದೆ, ಒಂದು ಕುಟುಂಬ ಬೀದಿಗೆ ಬಿದ್ದಿದೆ. ತಕ್ಷಣವೇ ಸರ್ಕಾರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಲೇಬೇಕು. ಇದುವರೆಗೆ ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್, ಪ್ರಮುಖರಾದ ಅಯ್ಯಾಳಿ ತಿಮ್ಮಪ್ಪ, ಕೆ.ಎಸ್.ರಾಘವೇಂದ್ರ ಇತರರಿದ್ದರು.