ಕಾನಹೊಸಹಳ್ಳಿಯಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರವನ್ನು ಮಾಜಿ ಶಾಸಕ, ಪಕ್ಷದ ವಕ್ತಾರ ಆಶ್ವತ್ಥ್ ನಾರಾಯಣಗೌಡ ಉದ್ಘಾಟಿಸಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಪ್ರಮುಖರಾದ ಚನ್ನಬಸವನಗೌಡ ಪಾಟೀಲ್, ಸಂಜೀವರೆಡ್ಡಿ, ಕಾಮಶೆಟ್ಟಿ ನಾಗರಾಜ, ಸೂರ್ಯಪಾಪಣ್ಣ, ಶಿವಪ್ರಸಾದ್ ಗೌಡ, ಬ್ಯಾಲಹುಣಸೆ ರಾಮಣ್ಣ ಇದ್ದರು.
ಕಾನಹೊಸಹಳ್ಳಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಪೊಳ್ಳು ಭರವಸೆ ನೀಡಿ ಮತದಾರರ ಗಮನ ಸೆಳೆಯುವ ತಂತ್ರಗಾರಿಕೆಗೆ ಫಲ ನೀಡದಿರುವುದು ಬಿಹಾರ ಚುನಾವಣೆಯಲ್ಲಿ ಸಾಬೀತು ಅಗಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ವಕ್ತಾರ ಆಶ್ವತ್ಥ್ ನಾರಾಯಣಗೌಡ ಹೇಳಿದರು.
ಗ್ರಾಮದ ಗಾಣಿಗ ಸಮುದಾಯ ಭವನದಲ್ಲಿ ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ನಕಲಿ ಮತದಾರ ಪಟ್ಟಿ ಎಂಬ ಸುಳ್ಳು ಪ್ರಚಾರದಿಂದ ಲಾಭ ಪಡೆಯಲು ಪ್ರಯತ್ನಿಸಿದ್ದರು. ಅದರ ಪ್ರತಿಫಲ ಫಲಿತಾಂಶದಲ್ಲಿ ಗೋಚರಿಸಿದೆ. ಮತದಾರ ಪಟ್ಟಿಯನ್ನು ಚುನಾವಣೆ ಆಯೋಗ ಪರಿಷ್ಕರಣೆ ಮಾಡಿದ ಪರಿಣಾಮ ಎನ್‌ಡಿಎಗೆ ಉತ್ತಮ ಫಲಿತಾಂಶ ಬಂದಿದೆ. ಈ ಬಾರಿ ಬಿಹಾರದಲ್ಲಿ ಮುಸ್ಲಿಮರು ಪ್ರಾಬಲ್ಯವಿರುವ 23 ಕ್ಷೇತ್ರಗಳ ಪೈಕಿಗೆ 18 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮುಸ್ಲಿಮರು ಬಿಜೆಪಿಗೆ ಮತದಾನ ಮಾಡಿರುವುದು ಸ್ಪಷ್ಟವಾಗಿದೆ ಎಂದರು.
ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಬೂತ್‌ಮಟ್ಟದಿಂದ ಮತದಾರರ ಪಟ್ಟಿ ಪರಿಷ್ಕರಣೆಯಾದರೆ ಮುಂಬರುವ ಚುನಾವಣೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಮಾಡಬೇಕಿದೆ ಎಂದರು.
ಕಾರ್ಯಕರ್ತರಿಗೆ ಪಕ್ಷದ ಸಿದ್ಧಾಂತ ಮುಖ್ಯವಾಗಬೇಕೇ ಹೊರತು ವ್ಯಕ್ತಿ ಸಿದ್ಧಾಂತವಲ್ಲ. ಬಿಹಾರ ಚುನಾವಣೆ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಸ್ನೇಹ ಬಯಸಿದ್ದ ಪ್ರಾದೇಶಿಕ ಪಕ್ಷಗಳು ಕೂಡ ಮುಳುಗುವ ಹಡಗಿನಂತಾಗಿವೆ. ರಾಜ್ಯ ಸರ್ಕಾರ ತುಂಗಭದ್ರಾ ಅಣೆಕಟ್ಟೆಗೆ ಗೇಟ್ ಅವಳವಡಿಕೆ ನೆಪದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಶ್ರೀರಾಮುಲು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, 23 ವರ್ಷಗಳ ನಂತರ ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂದರು.
ವಿಜಯನಗರ ಜಿಲ್ಲಾ ಅಧ್ಯಕ್ಷ ಸಂಜೀವರೆಡ್ಡಿ, ಬ್ಯಾಲಹುಣಸೆ ರಾಮಣ್ಣ, ತಾಲೂಕು ಮಂಡಲ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ್, ರಾಮದುರ್ಗ ಸೂರ್ಯಪಾಪಣ್ಣ, ಗುಡೇಕೋಟೆ ಶಿವಪ್ರಸಾದಗೌಡ, ತಾಪಂ ಮಾಜಿ ಅಧ್ಯಕ್ಷ ಜೆ.ಸಿ.ಧನುಂಜಯ, ಗುಳಿಗಿ ವೀರೇಂದ್ರ, ಬಿ.ಪಿ.ಚಂದ್ರಮೌಳಿ, ರಾಘವೇಂದ್ರ, ಕೊಲುಮೆಹಟ್ಟಿ ವೆಂಕಟೇಶ್, ಎಸ್.ದುರುಗೇಶ್ ಕುರಿಹಟ್ಟಿ ಕೊದಂಡರಾಮು, ಪವಿತ್ರಾ, ರೇಖಾ ಮಲ್ಲಿಕಾರ್ಜುನ, ಹುಲಿಕೆರೆ ಗೀತಾ, ದೊಡ್ಡಬಾಲಪ್ಪ, ಮಂಜುನಾಥ ನಾಯಕ, ಸುದರ್ಶನ ತಳವಾರ ಇತರರಿದ್ದರು.