ಮಲಪನಗುಡಿಯಲ್ಲಿ ಶನಿವಾರ ರಾತ್ರಿ ಪ್ರತ್ಯಕ್ಷವಾಗಿದ ಕರಡಿ.
ಹೊಸಪೇಟೆ: ತಾಲೂಕಿನ ಮಲಪನಗುಡಿಯಲ್ಲಿನ ವಿಜಯನಗರ ಕಾಲದ ಅಗಸಿ ಮಂಟಪದಲ್ಲಿ ಶನಿವಾರ ರಾತ್ರಿ ಕರಡಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಕರಡಿಯು ರಸ್ತೆಯಲ್ಲಿ ಸಂಚರಿಸುವುದನ್ನು ಕಂಡ ಸಾರ್ವಜನಿಕರು ಜೋರಾಗಿ ಕೇಕೆ ಹಾಕಿ, ಕೂಗಾಡಿ ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಪ್ರಸ್ತುತ ಈ ಭಾಗದಲ್ಲಿ ಕರಡಿ ಮಾತ್ರವಲ್ಲದೆ ಚಿರತೆಗಳ ಮುಕ್ತ ಸಂಚಾರವೂ ಹೆಚ್ಚಾಗಿದ್ದು, ಸಾರ್ವಜನಿಕರ ದೈನಂದಿನ ಜೀವನಕ್ಕೆ ಭೀತಿ ಎದುರಾಗಿದೆ. ನಿರಂತರವಾಗಿ ಕಾಡುಪ್ರಾಣಿಗಳು ಗ್ರಾಮದೊಳಗೆ ಲಗ್ಗೆ ಇಡುತ್ತಿರುವುದರಿಂದ ಕಂಗಾಲಾಗಿರುವ ಜನರ ಆತಂಕ ದೂರ ಆಗಬೇಕಿದೆ. ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವನ್ಯಜೀವಿಗಳನ್ನು ಸೆರೆಹಿಡಿದು ರಕ್ಷಣೆ ಒದಗಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.