ಹೊಸಪೇಟೆ: ಕಿಡಿಗೇಡಿಗಳು ಇಟ್ಟಿದ್ದ ಉರುಳಿಗೆ ಸಿಲುಕಿ ತೀವ್ರವಾಗಿ ನರಳುತ್ತಿದ್ದ ಕರಡಿಯೊಂದು ಚಿಕಿತ್ಸೆ ಫಲಿಸದೆ ಮಾರ್ಗಮಧ್ಯೆಯೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಶಿವಪುರ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ತಾಳೆ ಬಸಾಪುರ ತಾಂಡಾದಿಂದ ಓಬಳಾಪುರ ಗ್ರಾಮಕ್ಕೆ ತೆರಳುವ ಮಾರ್ಗದ ಹಲಗಪುರ ಸರ್ವೆ ನಂಬರ್ 487ರ ಅರಣ್ಯ ವ್ಯಾಪ್ತಿಯಲ್ಲಿ ಕರಡಿಯೊಂದು ಉರುಳಿಗೆ ಸಿಲುಕಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ, ಕಮಲಾಪುರ ಮೃಗಾಲಯದ ಪಶುವೈದ್ಯರ ನೆರವಿನಿಂದ ಕರಡಿಗೆ ಅರಿವಳಿಕೆ ನೀಡಿ ರಕ್ಷಣೆ ಮಾಡಿದರು.
ಕರಡಿಯ ಕುತ್ತಿಗೆ ಹಾಗೂ ಕಾಲಿಗೆ ಉರುಳು ಬಿಗಿದುಕೊಂಡಿದ್ದರಿಂದ ಗಂಭೀರ ಗಾಯಗಳಾಗಿದ್ದವು. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಉಪಚಾರಕ್ಕಾಗಿ ಕಮಲಾಪುರ ಮೃಗಾಲಯಕ್ಕೆ ವಾಹನದಲ್ಲಿ ಸಾಗಿಸುವ ವೇಳೆ ಗುಂಡಾ ಟ್ರೀ ಪಾರ್ಕ್ ಬಳಿ ಕರಡಿ ಸತ್ತುಹೋಗಿದೆ. ವನ್ಯಜೀವಿಗಳ ಬೇಟೆಗೆ ಉರುಳು ಇಟ್ಟ ಕಿಡಿಗೇಡಿಗಳ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ಪತ್ತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಬೀಸಿದ್ದಾರೆ.