- ಕಣ್ಣೀರಲ್ಲಿ ಕೈತೊಳೆಯುತ್ತಿರುವ ಅನ್ನದಾತ
- ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ
ಹೊಸಪೇಟೆ: ಬಾನಿನತ್ತ ಮುಖ ಮಾಡಿ ಬಸವಳಿದ ರೈತನಿಗೆ ಈ ಬಾರಿಯ ಮುಂಗಾರು ಮಳೆ ತೀವ್ರ ನಿರಾಸೆ ಮೂಡಿಸಿದೆ. ಕೆರೆಯಂತೆ ತುಂಬಿ ತುಳುಕಬೇಕಿದ್ದ ಹೊಲ-ಗದ್ದೆಗಳು ಬಿರುಕು ಬಿಟ್ಟು ನಿಂತಿವೆ. ಬಿತ್ತಿದ ಬೆಳೆ ಕಣ್ಣೆದುರೇ ಒಣಗಿ ಬೂದಿಯಾಗುತ್ತಿದ್ದರೆ, ಇತ್ತ ಸಾಲದ ಸುಳಿಯಲ್ಲಿ ಸಿಲುಕಿದ ರೈತರಿಗೆ ಬ್ಯಾಂಕ್‌ಗಳು ಜಪ್ತಿ ಮತ್ತು ಕಾನೂನು ಕ್ರಮದ ನೋಟಿಸ್ ಜಾರಿ ಮಾಡುತ್ತಿರುವುದು ಬೆಂಕಿಗೆ ಆಹುತಿ ನೀಡಿದಂತಾಗಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಮಳೆಯಾಗದೆ ಜಿಲ್ಲೆಯ ಬರಗಾಲದ ಛಾಯೆ ಆವರಿಸಿದೆ. ಸಾಲ-ಸೋಲ ಮಾಡಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ, ಹತ್ತಿ, ಶೇಂಗಾ ಹಾಗೂ ಇತರೆ ವಾಣಿಜ್ಯ ಬೆಳೆಗಳು ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಗಿವೆ. ಹಾಕಿದ ಬಂಡವಾಳವೂ ಕೈಗೆ ಸಿಗದೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ತಟವಟಪಡುವ ಪರಿಸ್ಥಿತಿ ನಿರ್ಮಾಣವಾಗಿರುವಾಗ, ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಬರಗಾಲದ ಭೀಕರತೆಯ ನಡುವೆ ಬ್ಯಾಂಕ್‌ಗಳ ಕಿರುಕುಳ ತಾಳಲಾರದೆ ರೈತಕುಲ ಕಂಗಾಲಾಗಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಸಾಲಮನ್ನಾ ಘೋಷಿಸಬೇಕೆಂದು ಆಕ್ರೋಶದ ಧ್ವನಿ ಎತ್ತಿದೆ.
ಅವನು ಕೋಟಿ ಜನರ ಹೊಟ್ಟೆ ತುಂಬಿಸುವ ರೈತ. ಆದರೆ ಇವತ್ತು ಅವನ ಸ್ವಂತ ಮನೆಯ ಒಲೆಯಲ್ಲಿ ಉರಿ ಕಮ್ಮಿಯಾಗಿದೆ, ಪಾತ್ರೆಯಲ್ಲಿ ಅನ್ನವಿಲ್ಲ. ಆಕಾಶದತ್ತ ಕಣ್ಣು ನೆಟ್ಟು, ಮಳೆರಾಯ ಬರುವನೆಂದು ದಿನ ಎಣಿಸಿ ಸೋತ ರೈತರಿಗೆ ಈಗ ಸಿಕ್ಕಿರುವುದು ಮುಂಗಾರಿನ ತಂಪಾದ ಮಳೆಯಲ್ಲ, ಬ್ಯಾಂಕ್‌ಗಳು ಕಳುಹಿಸಿದ ಕೆಂಪು ಬಣ್ಣದ ಜಪ್ತಿ ನೋಟಿಸ್‌ಗಳು. ಬರಗಾಲದ ಬೇಗೆಯಲ್ಲಿ ಬೆಂದು ಹೋದ ರೈತನ ಹೊಲದ ಬಿರುಕುಗಳಿಗಿಂತ, ಬ್ಯಾಂಕ್ ಅಧಿಕಾರಿಗಳು ಕೊಡುವ ನೋಟಿಸ್‌ಗಳಿಂದ ಆತನ ಹೃದಯದಲ್ಲಾಗುತ್ತಿರುವ ಬಿರುಕುಗಳು ಅತ್ಯಂತ ಭೀಕರವಾಗಿವೆ.
ಮಾನವೀಯತೆ ಮರೆತ ವ್ಯವಸ್ಥೆ
ಪ್ರಕೃತಿ ಮುನಿದರೆ ಮನುಷ್ಯನಾದರೂ ಕೈಹಿಡಿಯಬೇಕು. ಆದರೆ ಬ್ಯಾಂಕಿAಗ್ ವ್ಯವಸ್ಥೆ ರೈತನ ಈ ಭೀಕರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಕನಿಷ್ಠ ಮಾನವೀಯತೆಯನ್ನೂ ಮರೆತಂತೆ ವರ್ತಿಸುತ್ತಿದೆ. ಬೆಳೆ ಸಂಪೂರ್ಣ ನಾಶವಾಗಿ, ಇಡೀ ಕುಟುಂಬವೇ ಒಂದು ಹೊತ್ತಿನ ಗಂಜಿಗೆ ಪರದಾಡುತ್ತಿರುವಾಗ, ತಕ್ಷಣ ಸಾಲ ತೀರಿಸಿ, ಇಲ್ಲದಿದ್ದರೆ ಜಮೀನು ಹರಾಜು ಹಾಕುತ್ತೇವೆ ಎಂಬ ನೋಟಿಸ್‌ಗಳು ರೈತನ ಆತ್ಮಸಮ್ಮಾನವನ್ನು ಚೂರುಚೂರು ಮಾಡುತ್ತಿವೆ. ಜಮೀನು ಎಂದರೆ ರೈತನಿಗೆ ಬರಿ ಆಸ್ತಿಯಲ್ಲ, ಅದು ಆತನ ತಾಯಿ. ಆ ತಾಯಿಯನ್ನೇ ಹರಾಜು ಹಾಕುತ್ತೇವೆಂದಾಗ ಆತನ ಜೀವ ಹಿಂಡಿದAತಾಗುತ್ತಿದೆ. ರೈತರ ಮನೆ ಬಾಗಿಲಿಗೆ ತಲುಪುತ್ತಿದ್ದು, ಸಾಲ ತೀರಿಸಲಾಗದೆ ಕಂಗಾಲಾದ ರೈತರು ದಿಕ್ಕುತೋಚದಂತಾಗಿದ್ದಾರೆ. ಬ್ಯಾಂಕ್ ಅಧಿಕಾರಿಗಳ ನಿರಂತರ ಒತ್ತಡದಿಂದಾಗಿ ಹಲವು ರೈತರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ.
ಸರ್ಕಾರ ಮಧ್ಯಪ್ರವೇಶ ಮಾಡಲಿ
ಬರಪೀಡಿತ ಪ್ರದೇಶವೆಂದು ಘೋಷಿಸಿ, ಬ್ಯಾಂಕ್‌ಗಳು ನೀಡುತ್ತಿರುವ ಸಾಲ ಮರುಪಾವತಿ ನೋಟಿಸ್‌ಗಳನ್ನು ತಕ್ಷಣವೇ ತಡೆಹಿಡಿಯಬೇಕು. ಸಂಪೂರ್ಣ ಬೆಳೆ ಹಾನಿಯಾಗಿರುವುದರಿಂದ ರೈತರ ಕೃಷಿ ಹಾಗೂ ಜಾನುವಾರು ಸಾಲಗಳನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆ ನಷ್ಟ ಹೊಂದಿದ ಪ್ರತಿಯೊಬ್ಬ ರೈತನಿಗೂ ವೈಜ್ಞಾನಿಕವಾಗಿ ಪರಿಹಾರ ಧನ ತಲುಪಿಸಬೇಕು. ಮುಂದಿನ ಬೆಳೆ ಹಂಗಾಮಿಗೆ ಅನುಕೂಲವಾಗುವಂತೆ ಶೂನ್ಯ ಬಡ್ಡಿದರದಲ್ಲಿ ಹೊಸ ಸಾಲ ಸೌಲಭ್ಯ ಒದಗಿಸಬೇಕು. ರೈತ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುವ ಸರ್ಕಾರಗಳು, ನಿಜವಾದ ಸಂಕಷ್ಟದ ಸಮಯದಲ್ಲಿ ಅವರ ಕೈಹಿಡಿಯಬೇಕಿದೆ. ರೈತರ ರಕ್ಷಣೆಗೆ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಬೇಕಿದೆ. ಬ್ಯಾಂಕ್‌ಗಳಿಗೆ ಸೂಕ್ತ ನಿರ್ದೇಶನ ನೀಡಿ ಸಾಲ ವಸೂಲಾತಿಯನ್ನು ಅಮಾನತಿನಲ್ಲಿಡದಿದ್ದರೆ ಮತ್ತು ಸಾಲಮನ್ನಾದಂತಹ ನಿರ್ಣಾಯಕ ನಿರ್ಧಾರ ತಳೆಯದಿದ್ದರೆ, ರೈತರು ಬೀದಿಗಿಳಿದು ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ. ಇನ್ನಾದರೂ ಸರ್ಕಾರ ಕಣ್ಣುತೆರೆದು ರೈತರಿಗೆ ಜೀವದಾನ ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಬೆಳೆ ಹಾನಿಯಾಗಿರುವುದು ಮತ್ತು ರೈತರು ಎದುರಿಸುತ್ತಿರುವ ಕಷ್ಟಗಳು ನಮ್ಮ ಗಮನಕ್ಕೆ ಬಂದಿವೆ. ರೈತರಿಗೆ ಬ್ಯಾಂಕ್ ಗಳ ನೋಟಿಸ್ ನೀಡುತ್ತಿರುವುದು ಸರ್ಕಾರ ಗಮನಕ್ಕೆ ತರುತ್ತೇವೆ. ರೈತರು ಧೈರ್ಯಗೆಟ್ಟು ಯಾವುದೇ ತರಾತುರಿಯ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಮತ್ತು ಜಿಲ್ಲಾಡಳಿತ ರೈತರ ಬೆನ್ನಿಗೆ ನಿಲ್ಲಲಿದೆ.
— ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ವಿಜಯನಗರ
ಈ ಬಾರಿ ಮಳೆ ಬರಲಿಲ್ಲ. ಸಾಲ ಮಾಡಿ ಬಿತ್ತಿದ ಬೆಳೆ ಕಣ್ಣೆದುರೇ ಒಣಗಿ ಬೂದಿಯಾಗಿದೆ. ಹೀಗಿರುವಾಗ ಬ್ಯಾಂಕಿನವರು ದಿನಕ್ಕೊಂದು ನೋಟಿಸ್ ಕೊಟ್ಟು ಆಸ್ತಿ ಹರಾಜು ಹಾಕ್ತೀವಿ ಅಂತ ಹೆದರಿಸ್ತಿದ್ದಾರೆ. ಜಮೀನು ಅಂದರೆ ನಮಗೆ ಬರಿ ಮಣ್ಣಲ್ಲ, ಅದು ನಮ್ಮ ತಾಯಿ ಇದ್ದಂಗೆ. ಅದನ್ನೇ ಹರಾಜು ಹಾಕ್ತೀವಿ ಅಂದ್ರೆ ನಾವೆಲ್ಲಿಗೆ ಹೋಗ್ಬೇಕು? ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನಮ್ಮ ಸಾಲ ಮನ್ನಾ ಮಾಡಬೇಕು.
— ಸಣ್ಣಕ್ಕಿ ರುದ್ರಪ್ಪ, ರೈತ ಮುಖಂಡರು