ಹೊಸಪೇಟೆಯಲ್ಲಿ ಕಳ್ಳತನಕ್ಕೆ ಗುರಿಯಾದ ಎಟಿಎಂ
- ಸೈರನ್ ಅಲರ್ಟ್ನಿಂದ ತಪ್ಪಿದ ಭಾರಿ ಅನಾಹುತ!
ಹೊಸಪೇಟೆ: ನಗರದಲ್ಲಿ ಮಂಗಳವಾರ ತಡರಾತ್ರಿ ಎಟಿಎಂ ಲೂಟಿಗೆ ಯತ್ನಿಸಿದ ಖದೀಮರ ಪ್ಲಾನ್ ಸೈರನ್ ಅಲರ್ಟ್ನಿಂದಾಗಿ ಸಂಪೂರ್ಣ ಉಲ್ಟಾ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಕನಕದಾಸ ವೃತ್ತದ ಬಳಿ ಇರುವ ಬೋಡಾ ರಂಗಪ್ಪ ಅವರ ಮನೆಯ ಸಮೀಪದ ಎಸ್‌ಬಿಐ ಎಟಿಎಂ ಕೇಂದ್ರವನ್ನು ಗುರಿಯಾಗಿಸಿಕೊಂಡು ನಾಲ್ಕು ಜನರಿದ್ದ ಖದೀಮರ ತಂಡವೊAದು ಕಳ್ಳತನಕ್ಕೆ ಯತ್ನಿಸಿದೆ. ಗುರುತು ಸಿಗದಂತೆ ತಡೆಯಲು ಕಳ್ಳರು ಮೊದಲು ಎಟಿಎಂ ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣದ ಸ್ಪ್ರೇ ಹೊಡೆದಿದ್ದಾರೆ. ಆದರೆ, ಇದೇ ವೇಳೆ ಎಟಿಎಂನಲ್ಲಿದ್ದ ಸ್ವಯಂಚಾಲಿತ ಸೈರನ್ ಅಲರ್ಟ್ ಸಿಸ್ಟಮ್ ಸಕ್ರಿಯಗೊಂಡು ಜೋರಾಗಿ ಸೌಂಡ್ ಮಾಡಿದೆ.
ಸೈರನ್ ಸದ್ದು ಕೇಳುತ್ತಿದ್ದಂತೆ ವಿಜಯನಗರ ಪೊಲೀಸ್ ಕಂಟ್ರೋಲ್ ರೂಂಗೆ ತಕ್ಷಣವೇ ಮಾಹಿತಿ ರವಾನೆಯಾಗಿದೆ. ಅಲರ್ಟ್ ಆದ ಕಂಟ್ರೋಲ್ ರೂಂ ಸಿಬ್ಬಂದಿ ಕೂಡಲೇ ನೈಟ್ ಬೀಟ್‌ನಲ್ಲಿದ್ದ ಪೊಲೀಸರಿಗೆ ಸ್ಥಳಕ್ಕೆ ಧಾವಿಸುವಂತೆ ಸೂಚಿಸಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ, ಸಿಕ್ಕಿಬೀಳುವ ಭೀತಿಯಿಂದ ಕಳ್ಳರ ಗ್ಯಾಂಗ್ ಅಲ್ಲಿಂದ ಕಾಲ್ಕಿತ್ತಿದೆ. ಸದ್ಯ ಇಲ್ಲಿನ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದಾರೆ.