ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹಾಗೂ ತಾಪಂ ಇಒ ಪರಮೇಶ್ವರಗೆ ವಿವಿಧ ಕಾರ್ಮಿಕ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು. 
ವಿಜಯನಗರ

ಕನಿಷ್ಠ 26 ಸಾವಿರ ರೂ. ವೇತನ ನೀಡಲಿ

ಹೂವಿನಹಡಗಲಿ: ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹಾಗೂ ತಾಪಂ ಇಒ ಪರಮೇಶ್ವರಗೆ ಮನವಿ ಸಲ್ಲಿಸಿದವು.
ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಹಲಗಿ ಸುರೇಶ್ ಮಾತನಾಡಿ, ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸರ್ಕಾರ ಹಿಂಪಡೆಯಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕನಿಷ್ಠ 26 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೋಮುವಾದ ಸೃಷ್ಟಿಗೆ ಅವಕಾಶ ಮಾಡಿಕೊಡಬಾರದು. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪೂರ್ಣಪ್ರಮಾಣದ ಉದ್ಯೋಗಿಯಾಗಿದ್ದು, ಅವರನ್ನು ಕಾಯಂ ಉದ್ಯೋಗಿಯಾಗಿ ಪರಿಗಣಿಸಿ ಕನಿಷ್ಠ ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಸಿಪಿಐ ತಾಲೂಕು ಕಾರ್ಯದರ್ಶಿ ಜಂಗ್ಲಿಸಾಬ್, ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಅಧ್ಯಕ್ಷ ಮುಕುಂದಗೌಡ, ಎಐಟಿಯುಸಿ ತಾಲೂಕು ಅಧ್ಯಕ್ಷೆ ಜಯಲಕ್ಷ್ಮೀ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಭೂಷಣ್, ದೇವದಾಸಿ ವಿಮೋಚನಾ ಸಂಘದ ತಾಲೂಕು ಅಧ್ಯಕ್ಷ ದಂಡೆಮ್ಮ, ಬಿಸಿಯೂಟ ತಯಾರಕರ ಸಂಘದ ಜಿಲ್ಲಾಧ್ಯಕ್ಷೆ ಅನುಸೂಯಮ್ಮ, ಪ್ರಮುಖರಾದ ಚಾಂದ್‌ಬಿ, ಸವಿತಾ, ಗುಣಶೀಲ, ವಿನೋದ, ಪೀರಾವಲಿ, ರಜಾಕ್ ಇತರರಿದ್ದರು.