ಹೂವಿನಹಡಗಲಿಯಲ್ಲಿ ಆಯೋಜಿಸಿದ್ದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ (ಎಐಟಿಯುಸಿ)ನ 6ನೇ ತಾಲೂಕು ಸಮ್ಮೇಳನವನ್ನು ಅಧ್ಯಕ್ಷ ಅಮ್ಜದ್ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷೆ ಬಿ.ಜಯಲಕ್ಷ್ಮೀ, ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಎಐಕೆಎಸ್‌ನ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ, ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸಂತೋಷ ಇತರರಿದ್ದರು.
ಹೂವಿನಹಡಗಲಿ: ದೇಶದ ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ಸೌಲಭ್ಯ ಹೆಚ್ಚಿಸುವಂತೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದರೂ ಈ ಬಗ್ಗೆ ಚರ್ಚಿಸದೆ ಮಹಿಳೆಯರನ್ನು ಕತ್ತಲಿಗೆ ತಳ್ಳಲಾಗುತ್ತಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್‌ನ ಅಧ್ಯಕ್ಷ ಅಮ್ಜದ್ ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್(ಎಐಟಿಯುಸಿ)ನ 6ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂಸತ್ತಿನಲ್ಲಿ ಶೇ.33ರ ಮೀಸಲಾತಿಯ ಶಾಸನವನ್ನು ಅಂಗೀಕರಿಸಿ ಅದರ ಕುರಿತು ಇಲ್ಲಿಯವರೆಗೂ ಚರ್ಚಿಸದೆ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಇಂದಿಗೂ ಕೂಡ ಅಂಗನವಾಡಿಗಳನ್ನು ಅವೈಜ್ಞಾನಿಕ ಶಿಕ್ಷಣ ಕೇಂದ್ರಗಳನ್ನಾಗಿಸಿ ಇಡೀ ಐಸಿಡಿಎಸ್ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆಯರನ್ನು ಅನ್ಯ ಕೆಲಸಗಳಿಗೆ ನಿಯೋಜನೆ ಮಾಡುವ ಮೂಲಕ ಕೇಂದ್ರಗಳನ್ನು ನಿಶಕ್ತಿಗೊಳಿಸಲಾಗುತ್ತಿದೆ. ರಕ್ತ ಹೀನತೆ, ಆಹಾರ ಕೊರತೆಯಿಂದ ಸುಮಾರು 2ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಗುಜರಾತ್ ಮಾದರಿಯಾಗಿದೆ. ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರಿಗೆ 2018ರಿಂದಲೂ ಈವರೆಗೆ ನಯಾ ಪೈಸೆ ಗೌರವಧನ ಹೆಚ್ಚಳ ಮಾಡಿಲ್ಲ ಎಂದು ಟೀಕಿಸಿದರು. ಯುದ್ಧ ಪರಿಣಾಮದಿಂದ ದೇಶದಲ್ಲಿ ಸಿಲಿಂಡರ್ ಹಾಗೂ ವಿವಿಧ ದಿನ ಬಳಕೆ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗುತ್ತಿದೆ ಎಂದರು.
ಫೆಡರೇಷನ್ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ, ಎಐಕೆಎಸ್‌ನ ರಾಜ್ಯ ಉಪಾಧ್ಯಕ್ಷ ಎಚ್.ವೀರಣ್ಣ, ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ಸಂತೋಷ ಹಾಗೂ ಇತರರು ಮಾತನಾಡಿದರು. ತಾಲೂಕು ಅಧ್ಯಕ್ಷ ಬಿ.ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿಜಯಕುಮಾರ್, ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಕೆ.ರೇಣುಕಮ್ಮ, ಎಐಕೆಎಸ್ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ, ಪ್ರಮುಖರಾದ ಹಲಗಿ ಸುರೇಶ, ಬಸಮ್ಮ, ಎನ್.ಸುಮಾ, ಎನ್.ರತ್ನಮ್ಮ ಜಂಗ್ಲಿಸಾಬ್, ಪಿ.ಕವಿತಾ, ಮುಕುಂದಗೌಡ, ಬಸವರಾಜ ಸಂಶಿ, ದಂಡೆಮ್ಮ, ಮಂಜುಳಾ ಫಾತಿಮಾ ಇತರರಿದ್ದರು.