ಪ್ರಮುಖ ಮುಖ್ಯಾಂಶಗಳು
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಜಯನಗರ ಜಿಲ್ಲೆಗೆ ಘೋಷಣೆಯಾಗಿರುವ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ಕೂಡ್ಲಿಗಿ ತಾಲೂಕಿನ ಗುಂಡಿನ ಹೊಳೆಯಲ್ಲಿ ಕಾರ್ಯಾರಂಭ ಮಾಡಲಿದೆ. ಇದರ ಮೊದಲ ಹಂತವಾಗಿ ಕೃಷಿ ಸಂಶೋಧನಾ ಕೇಂದ್ರವು ಅತಿ ಶೀಘ್ರದಲ್ಲಿಯೇ ತೆರೆಯಲ್ಪಡಲಿದ್ದು, ಜಿಲ್ಲೆಯ ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಕೂಡ್ಲಿಗಿ ತಾಲೂಕಿನಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಆರಂಭಿಸುವ ಕುರಿತು ರಾಜ್ಯ ಸರ್ಕಾರವು 2024ರ ಅಕ್ಟೋಬರ್ನಲ್ಲಿ ಅಧಿಕೃತ ಆದೇಶ ಹೊರಡಿಸಿತ್ತು. ಈ ಪ್ರಕ್ರಿಯೆಯ ಭಾಗವಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಜಾಗ ಹಸ್ತಾಂತರಿಸುವ ಕಾರ್ಯ ಹಾಗೂ ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಡರ್ ರಿಸರ್ಚ್ (ಐಸಿಎಆರ್) ಅಧಿಕಾರಿಗಳ ತಂಡದ ಪರಿಶೀಲನಾ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ.
ಕೂಡ್ಲಿಗಿ ಸಮೀಪದ ಗುಂಡಿನಹೊಳೆಯಲ್ಲಿ ಇರುವ ಕೃಷಿ ಇಲಾಖೆ ವ್ಯಾಪ್ತಿಯ ಕೃಷಿ ಬೀಜೋತ್ಪಾದನಾ ಕೇಂದ್ರದ 50 ಎಕರೆ ಜಾಗವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿವಿಗೆ ಈಗಾಗಲೇ ಹಸ್ತಾಂತರಿಸಲಾಗಿದೆ. ದೆಹಲಿಯ ಐಸಿಎಆರ್ ತಂಡದ ಅಂತಿಮ ಪರಿಶೀಲನೆ ಮಾತ್ರ ಬಾಕಿ ಉಳಿದಿದೆ. 50 ಎಕರೆ ಜಾಗ ಲಭ್ಯವಿರುವ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ರಾಯಚೂರು ಕೃಷಿ ವಿವಿಯಿಂದ ಒಬ್ಬರು ವಿಜ್ಞಾನಿ ಹಾಗೂ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಕೃಷಿ ಸಂಶೋಧನಾ ಕೇಂದ್ರವನ್ನು ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೇಂದ್ರವು ಕಾರ್ಯಾರಂಭ ಮಾಡುವುದರಿಂದ ಕೂಡ್ಲಿಗಿ ತಾಲೂಕು ಮತ್ತು ವಿಜಯನಗರ ಜಿಲ್ಲೆಯ ರೈತರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ.
ಸಾಮಾನ್ಯವಾಗಿ ರಾಜ್ಯದ ಪ್ರತಿ ಜಿಲ್ಲೆಗೆ ಒಂದು ಹಾಗೂ ಕಲಬುರಗಿಯಂತಹ ದೊಡ್ಡ ಜಿಲ್ಲೆಗಳಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರಗಳಿವೆ. ಈ ಹಿಂದೆ ಅಖಂಡ ಬಳ್ಳಾರಿ ಜಿಲ್ಲೆಗೆ ಹಗರಿ ಕೃಷಿ ವಿಜ್ಞಾನ ಕೇಂದ್ರವು ಸೇವೆ ನೀಡುತ್ತಿತ್ತು. ಆದರೆ, ಜಿಲ್ಲಾ ವಿಭಜನೆಯ ನಂತರ ನೂತನ ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಕೆವಿಕೆ ಇಲ್ಲದ ಕಾರಣ ರಾಯಚೂರು ಕೃಷಿ ವಿಜ್ಞಾನ ವಿವಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿದ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ ಅವರು, ಹಿಂದುಳಿದ ತಾಲೂಕಾದ ಕೂಡ್ಲಿಗಿಯಲ್ಲಿಯೇ ಈ ಕೇಂದ್ರ ಸ್ಥಾಪನೆಯಾಗಬೇಕು ಎಂದು ವಿಶೇಷ ಆಸಕ್ತಿ ವಹಿಸಿ ಸರ್ಕಾರದಿಂದ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಗುಂಡಿನಹೊಳೆಯಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭಿಸುವ ಮೂಲಕ ಕೆವಿಕೆ ಸ್ಥಾಪನೆಗೆ ಭದ್ರ ಬುನಾದಿ ಹಾಕಲಾಗುತ್ತಿದೆ.
ಕೃಷಿ ವಿಜ್ಞಾನ ಕೇಂದ್ರಗಳು ಸಂಪೂರ್ಣವಾಗಿ ಭಾರತ ಸರ್ಕಾರದ ಐಸಿಎಆರ್ ಅನುದಾನದಲ್ಲಿ ನಡೆಯಲಿವೆ. ಹೀಗಾಗಿ, ಕೂಡ್ಲಿಗಿಯಲ್ಲಿ ಕೆವಿಕೆ ಆರಂಭಕ್ಕೆ ಒಪ್ಪಿಗೆ ಹಾಗೂ ಅನುದಾನ ಬಿಡುಗಡೆ ಕೋರಿ ರಾಯಚೂರು ಕೃಷಿ ವಿವಿಯಿಂದ ಈಗಾಗಲೇ ಪತ್ರ ವ್ಯವಹಾರ ನಡೆಸಲಾಗಿದೆ. ಐಸಿಎಆರ್ ಅಧಿಕಾರಿಗಳ ತಂಡವು ಮಾರ್ಚ್ ಅಂತ್ಯದೊಳಗೆ ಕೂಡ್ಲಿಗಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಮುಂಬರುವ ಬಜೆಟ್ನಲ್ಲಿ ಅಗತ್ಯ ಅನುದಾನ ದೊರೆಯುವ ಭರವಸೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ತೀರಾ ಹಿಂದುಳಿದ ತಾಲೂಕಾದ ಕೂಡ್ಲಿಗಿಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಆರಂಭಿಸಲು ಶ್ರಮಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರ ಆರಂಭದಿಂದ ಕೂಡ್ಲಿಗಿ ತಾಲೂಕು ಹಾಗೂ ವಿಜಯನಗರ `ಜಿಲ್ಲೆ ರೈತರಿಗೆ ಅನುಕೂಲವಾಗಲಿದೆ. ಮೊದಲ ಹಂತದಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭವಾಗುವುದು ಸಂತಸ ತಂದಿದೆ.
ವಿಜಯನಗರ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ಕೂಡ್ಲಿಗಿ ಸಮೀಪದ ಗುಂಡಿನಹೊಳೆ ಕೃಷಿ ಬೀಜೋತ್ಪಾದನೆ ಕೇಂದ್ರದ 50 ಎಕರೆ ಜಾಗವನ್ನು ಈಗಾಗಲೇ ಕೃಷಿ ವಿವಿ ಹೆಸರಿಗೆ ನೀಡಲಾಗಿದೆ. ಕೇಂದ್ರ ಸರ್ಕಾರದ ಐಸಿಎಆರ್‌ನಿಂದ ಕೆವಿಕೆ ಜಾಗದ ಪರಿಶೀಲನೆ ಜತೆಗೆ ಅನುದಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ ಕೃಷಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು.