ಹರಪನಹಳ್ಳಿಯ ಗ್ಯಾಸ್ ವಿತರಕರ ಅಂಗಡಿಗೆ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಭೇಟಿ ನೀಡಿ ಸಿಲಿಂಡರ್‌ಗಳ ಮಾರಾಟದ ಮಾಹಿತಿ ಪಡೆದರು. ಆಹಾರ ಇಲಾಖೆ ಅಧಿಕಾರಿ ಭರತ್, ಗ್ಯಾಸ್ ಏಜೆನ್ಸಿ ಮಾಲೀಕ ಕೃಷ್ಣಂರಾಜರೆಡ್ಡಿ ಇದ್ದರು. 
ವಿಜಯನಗರ

ಹೆಚ್ಚಿನ ಹಣಕ್ಕೆ ಸಿಲಿಂಡರ್ ಮಾರಿದರೆ ಕ್ರಮ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಎಚ್ಚರಿಕೆ
  • ಗ್ಯಾಸ್ ವಿತರಕರ ಅಂಗಡಿ ಪರಿಶೀಲನೆ
ಹರಪನಹಳ್ಳಿ: ತಾಲೂಕಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದೂರಿನನ್ವಯ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬು ಗ್ಯಾಸ್ ವಿತರಕರ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದರು.
ಹಳ್ಳಿ ಜನರು ಎರಡು ತಿಂಗಳಿಗೊಮ್ಮೆ ಸಿಲಿಂಡರ್ ಪಡೆಯುತ್ತಿದ್ದು, ಅವರ ಒಂದು ತಿಂಗಳ ಸಿಲಿಂಡರನ್ನು ಅಕ್ರಮವಾಗಿ ಡಿಎಸ್‌ಸಿ ನಂಬರ್ ಮೂಲಕ ಪಡೆದು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತದೆ ಎನ್ನುವ ಆರೋಪವಿದೆ.
ಹಳ್ಳಿಗಳ ಸಬ್ ಏಜೆನ್ಸಿಗಳಿಗೆ ಸಿಲಿಂಡರ್ ವಿತರಿಸಿ ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಚ್ಚಿನ ಹಣ ವಸೂಲಾತಿ, ಸಿಲಿಂಡರ್ ಅಭಾವ ಉಂಟು ಮಾಡುವ ಪ್ರಯತ್ನ ನಡೆಸಿದರೆ ಏಜೆನ್ಸಿ ಮಾಲೀಕರು, ವಿತರಕರನ್ನು ನೇರ ಹೊಣೆಯಾಗಿಸಿ ಎಲ್‌ಪಿಜಿ ಆದೇಶ 2000ರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ಯಾಸ್ ಏಜೆನ್ಸಿಯ ವಿತರಣಾ ಸಿಬ್ಬಂದಿ ಸಿಲಿಂಡರ್‌ಗಳನ್ನು ಬೀದಿಬದಿ ವ್ಯಾಪಾರಿಗಳ ವಾಣಿಜ್ಯ ಉಪಯೋಗಕ್ಕಾಗಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಅನಧಿಕೃತ ಹಾಗೂ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ದೂರು ಕೇಳಿ ಬರುತ್ತಿವೆ. ಇದು ಗಂಭೀರ ವಿಚಾರವಾಗಿದ್ದು, ಇಂಥ ಘಟನಗೆಳು ಮರುಕಳಿಸದಂತೆ ಕೆಲಸ ನಿರ್ವಹಿಸಿ ಎಂದು ಸೂಚಿಸಿದರು.