ಹುಲಿಕೆರೆ ಗ್ರಾಮದಲ್ಲಿ ಯುವ ಸಾಹಿತಿ ಎಚ್.ವಿ.ಆದರ್ಶ ಬರೆದಿರುವ ’ಸಮತ್ವ ಕಂಡ ಸಮಾಜ’ ಕೃತಿಯನ್ನು ಅಂಕಣ ಬರಹಗಾರ ಎ.ಆರ್.ಮಣಿಕಾಂತ ಬಿಡುಗಡೆ ಮಾಡಿದರು.
ಕಾನಹೊಸಹಳ್ಳಿ: ಅಧುನಿಕತೆ ಭರಾಟೆ, ಸಾಮಾಜಿಕ ಅಸಮಾನತೆ ತಲ್ಲಣಗಳ ನಡುವೆ ವಾಸ್ತವ ಅರಿಯದೆ ಬದುಕುತ್ತಿವೆ ಎಂಬ ವಿಷಯವಸ್ತು ಹೊಂದಿರುವ ಹಲವಾರು ಕತೆಗಳನ್ನು ಹೊಂದಿರುವ ‘ಸಮತ್ವ ಕಂಡ ಸಮಾಜ’ ಕಥಾ ಸಂಕಲನ ಸಮಾಜಕ್ಕೆ ಕನ್ನಡಿಯಾಗಿದೆ ಎಂದು ಅಂಕಣ ಬರಹಗಾರ ಎ.ಆರ್.ಮಣಿಕಾಂತ್ ಹೇಳಿದರು.
ಹುಲಿಕೆರೆಯಲ್ಲಿ ಎಚ್.ವಿ.ಆದರ್ಶ ಬರೆದಿರುವ ‘ಸಮತ್ವ ಕಂಡ ಸಮಾಜ’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು. ಯುವ ಸಾಹಿತಿ ಎಚ್.ವಿ.ಆದರ್ಶ ಅವರು ಸಮಾಜವನ್ನು ನೋಡುವ ದೃಷ್ಟಿಕೋನ ವಿಭಿನ್ನವಾಗಿದ್ದು, ವಿದೇಶದಲ್ಲಿರುವ ಅನೇಕರು ಹೆತ್ತವರ ಸಂಬಂಧವನ್ನು ದುಡ್ಡಿನಲ್ಲಿ ಅಳೆಯುವಂಥ ಸಂಗತಿ ಸೇರಿದಂತೆ ಸಮಾಜದಲ್ಲಿ ನಡೆಯುವ ವಾಸ್ತವ ಸಂಗತಿಗಳನ್ನು ಮುಲಾಜಿಲ್ಲದೆ ಹೇಳಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಸಮತ್ವದ ಭಾವ ಮೂಡಿಸುತ್ತ ಒಳನೋಟವನ್ನು ಬರವಣಿಗೆಯಲ್ಲಿ ದಾಖಲಿಸಿದ್ದಾರೆ ಎಂದರು.
ಬಿಇಒ ಮೈಲೇಶ್ ಬೇವೂರು ಮಾತನಾಡಿ, ಲೇಖಕರ ಬರಹ ಊಹೆಗಳಾಗಿರದೆ ಅನುಭವಗಳಾಗಿರುತ್ತವೆ. ಈ ಅನುಭವ ಸಮಾಜ ಕಟ್ಟಲು ನೆರವಾಗುತ್ತದೆ. ’ಸಮತ್ವ ಕಂಡ ಸಮಾಜ’ ಕಥಾ ಸಂಕಲನ ಅನುಭವಗಳ ಗುಚ್ಛವಾಗಿದೆ. ತಾಲೂಕಿನ ಹಿರಿಯ ಸಾಹಿತಿಗಳಾದ ಹಿ.ಮ.ನಾಗಯ್ಯ, ಎಚ್.ಎಂ.ಮರುಳಸಿದ್ಧಯ್ಯ, ಕುಂ.ವೀರಭದ್ರಪ್ಪ ಅವರಂತೆ ಆದರ್ಶ ಅವರ ಹೆಸರು ಪ್ರಜ್ವಲಿಸಲಿ ಎಂದರು.
ಹಿರಿಯ ಸಾಹಿತಿ ಎನ್.ಎಂ.ರವಿಕುಮಾರ್ ಮಾತನಾಡಿ, ವಿದ್ಯಾವಂತರು ಹೆಚ್ಚಿರುವ ಈಗಿನ ಸಮಾಜದಲ್ಲಿ ಸಮತ್ವ, ಸಮಾನತೆ, ಪ್ರೀತಿ, ವಿಶ್ವಾಸದ ಕೊರತೆ ಇರುವುದು ನೋವಿನ ಸಂಗತಿಯಾಗಿದೆ ಎಂದರು.
ಕಾನಮಡುಗು ದಾಸೋಹ ಮಠದ ಧರ್ಮಾಧಿಕಾರಿ ದಾ.ಮ.ಐಮಡಿ ಶರಣಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಹಿತಿ ಭೀಮಣ್ಣ ಗಜಾಪುರ, ಎನ್.ಎಂ.ರವಿಕುಮಾರ್, ನಿವೃತ್ತ ಉಪನ್ಯಾಸಕ ವಸಂತ ಸಜ್ಜನ್, ನಾಗರತ್ನ ಮಣಿಕಾಂತ್, ಸಾವಯವ ಕೃಷಿಕ ಎಚ್.ವಿ.ಸಜ್ಜನ್, ಮುಖ್ಯಶಿಕ್ಷಕಿ ಡಿ.ಟಿ.ವಿಮಲಾಕ್ಷಿ, ಎಎಸ್‌ಐ ಗುರುಬಸವರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಶಿವಾನಂದ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಾ.ಮ.ಸಂಗಮೇಶ್ವರಯ್ಯ, ನಿವೃತ್ತ ಶಿಕ್ಷಕ ಶ್ಯಾಮಸುಂದರ ಸಫಾರೆ, ಶರಣನಗೌಡ, ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ, ಬಿ.ನಾಗರಾಜ್,ಭಾರತಿ ಸಜ್ಜನ್, ದಯಾನಂದ ಸಜ್ಜನ್, ಬಿ.ಟಿ.ಗುದ್ದಿ ಅಜಯ್ ಇದ್ದರು.