ಹೊಸಪೇಟೆ ಸರ್ಕಾರಿ ಭವನದಲ್ಲಿ ನಡೆದ ರೈತ ಸಮ್ಮೇಳನದಲ್ಲಿ ರಾಜ್ಯ ಅಧ್ಯಕ್ಷ ಯು.ಬಸವರಾಜ ಮಾತನಾಡಿದರು. ಪ್ರಮುಖರಾದ ಗುಜ್ಜಲ್ ಕರಣಂ, ಎನ್.ಯಲ್ಲಲಿಂಗ, ಆನಂದ, ಕೊಟಗಿ ಮಲ್ಲಿಕಾರ್ಜುನ, ರಾಘವೇಂದ್ರ, ಹೇಮಂತನಾಯ್ಕ ಇತರರಿದ್ದರು. 
ವಿಜಯನಗರ

ಕೃಷಿ ಉಳಿಸಲು ಒಗ್ಗಟ್ಟಿನ ಹೋರಾಟ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು.ಬಸವರಾಜ ಕರೆ

ಹೊಸಪೇಟೆದೇಶದಲ್ಲಿ ಭೂಮಿಯನ್ನೇ ನಂಬಿ ದುಡಿಮೆ ಮಾಡುತ್ತಿರುವ ರೈತರು ಮತ್ತು ಕೂಲಿಕಾರರ ಆದಾಯ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು.ಬಸವರಾಜ ಹೇಳಿದರು.

ರೈತರ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ನಗರದ ಸರ್ಕಾರಿ ಭವನದಲ್ಲಿ ನಡೆದ 2ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶದ ಕೆಲವೇ ಕೆಲವು ಶ್ರೀಮಂತರ ಆದಾಯ ಮತ್ತು ಆಸ್ತಿ ಎಲ್ಲೆ ಮೀರಿ ಬೆಳೆಯುತ್ತಿದೆ. ಇದಕ್ಕೆ ಕಾರಣವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸದಿದ್ದರೆ, ಬಿಕ್ಕಟ್ಟಿನಲ್ಲಿರುವ ಕೃಷಿಯನ್ನಾಗಲಿ ಅಥವಾ ಸಂಕಷ್ಟದಲ್ಲಿರುವ ರೈತ ಸಮುದಾಯವನ್ನಾಗಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ, ವಿದ್ಯುತ್ ಖಾಸಗೀಕರಣ, ಬೀಜ ಮಸೂದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಿದ್ದುಪಡಿ ಮಾಡುವ ಮೂಲಕ ರೈತರ ಮತ್ತು ಕೂಲಿಕಾರರ ಆದಾಯವನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಲಾಗಿದೆ ಎಂದು ಹೇಳಿದರು.

ಒಂದು ಕಡೆ ಸರ್ಕಾರಿ ಮತ್ತು ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರಗಳನ್ನು ನೀಡದೇ, ಮತ್ತೊಂದೆಡೆ ಫಲವತ್ತಾದ ಕೃಷಿಯೋಗ್ಯ ಭೂಮಿಯನ್ನು ವಿವಿಧ ಯೋಜನೆಗಳ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ದೇಶಕ್ಕೆ ಅನ್ನ ನೀಡುವ ರೈತಾಪಿ ವರ್ಗ ಸಂಪೂರ್ಣ ನಾಶವಾಗುತ್ತದೆ. ಆದ್ದರಿಂದ ರೈತರು ಮತ್ತು ಕೃಷಿ ಉಳಿಸಲು ಎರಲ್ಲ ದುಡಿಯುವ ಜನ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕಾಗಿದೆ ಎಂದರು.