ಹೊಸಪೇಟೆ: ಹಲವು ವರ್ಷಗಳಿಂದ ಮೂಲಸೌಕರ್ಯ ಕೊರತೆ, ಶಿಥಿಲ ಕಟ್ಟಡ ಹಾಗೂ ಸ್ಥಳಾವಕಾಶ ಸಮಸ್ಯೆಯಿಂದ ಸೊರಗಿದ್ದ ಇಲ್ಲಿನ ಪಶುಸಂಗೋಪನೆ ಇಲಾಖೆಗೆ ಇದೀಗ ಮುಕ್ತಿ ಸಿಕ್ಕಿದೆ. ಹೌದು ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಗಣಿ ಮತ್ತು ಖನಿಜ ನಿಗಮದಿಂದ ಬರೋಬ್ಬರಿ 20.68 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಇಲಾಖೆ ಚಿತ್ರಣವೇ ಬದಲಾಗಲಿದೆ.
ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆ, ಆಧುನಿಕ ಚಿಕಿತ್ಸೆ ಮತ್ತು ರೈತರಿಗೆ ತರಬೇತಿ ನೀಡುವ ಬಹುನಿರೀಕ್ಷಿತ ಯೋಜನೆಗಳಿಗೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಕಾಮಗಾರಿಗಳಿಗೆ ವೇಗ ದೊರೆಯುತ್ತಿದೆ. ಗ್ರಾಮೀಣ ಭಾಗದ ಮೂಕ ಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ತಾಲೂಕಿನ ಪ್ರಮುಖ ಕೇಂದ್ರಗಳಲ್ಲಿ ಮೂಲಸೌಕರ್ಯ ಬಲಪಡಿಸಲಾಗುತ್ತಿದೆ. ತಾಲೂಕಿನ ಕಮಲಾಪುರ, ಚಿಲಕನಹಟ್ಟಿ, ಗಾದಿಗನೂರು, ಬೈಲುವದ್ದಿಗೇರಿ ಹಾಗೂ ಮರಿಯಮ್ಮನಹಳ್ಳಿಯಲ್ಲಿ ತಲಾ 50 ಲಕ್ಷ ರೂ.ನಂತೆ ಒಟ್ಟು 2.5 ಕೋಟಿ ರೂ. ವೆಚ್ಚದಲ್ಲಿ 5 ಸುಸಜ್ಜಿತ ಪಶು ಚಿಕಿತ್ಸಾಲಯ ನಿರ್ಮಾಣವಾಗಲಿವೆ. ಇನ್ನು ಮಲಪನಗುಡಿ, ನಾಗೇನಹಳ್ಳಿ, ಕಾಕುಬಾಳ, ನಾಗಲಾಪುರ ಹಾಗೂ ಡಾಣಾಪುರ ಪಶು ಆಸ್ಪತ್ರೆಗಳ ನವೀಕರಣಕ್ಕೆ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಇಲಾಖೆಯ ಸ್ವಂತ ಆವರಣದಲ್ಲೇ 6.70 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಪಾಲಿಕ್ಲಿನಿಕ್ ಆಸ್ಪತ್ರೆ ಮತ್ತು ರೈತ ತರಬೇತಿ ಕೇಂದ್ರ ತಲೆ ಎತ್ತಲಿದೆ. ಇಲ್ಲಿ ಶಸ್ತ್ರ ಚಿಕಿತ್ಸೆ, ಸ್ಕ್ಯಾನಿಂಗ್, ಲ್ಯಾಬ್ ಸೇರಿ ಸುಧಾರಿತ ಚಿಕಿತ್ಸೆಗಳು ಒಂದೇ ಸೂರಿನಡಿ ದೊರೆಯಲಿವೆ. ಜತೆಗೆ ವೈಜ್ಞಾನಿಕ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ಹಾಗೂ ರೋಗ ತಡೆಗಟ್ಟುವ ಕುರಿತು ರೈತರಿಗೆ ನಿಯಮಿತ ತರಬೇತಿ ನೀಡಲು ಈ ಕೇಂದ್ರ ಪೂರಕವಾಗಲಿದೆ.
ಇಲಾಖೆಯ ಆಡಳಿತಾತ್ಮಕ ಕಾರ್ಯ ಸುಗಮಗೊಳಿಸಲು 1.80 ಕೋಟಿ ರೂ. ವೆಚ್ಚದಲ್ಲಿ ನೂತನ ಎಡಿ (ಸಹಾಯಕ ನಿರ್ದೇಶಕ) ಮತ್ತು ಡಿಡಿ (ಉಪನಿರ್ದೇಶಕರ) ಕಚೇರಿ ನಿರ್ಮಾಣವಾಗಲಿವೆ. ಇದಕ್ಕಾಗಿ ಸಂಕ್ಲಾಪುರ ಅಥವಾ ನಾಗಪ್ಪನ ಕಟ್ಟೆ ಬಳಿ ಒಂದು ಎಕರೆ ಜಮೀನು ಗುರುತಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ದಶಕಗಳಿಂದ ಇಕ್ಕಟ್ಟಾದ ಕೊಠಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ-ಸಿಬ್ಬಂದಿಗೆ ಆಧುನಿಕ ಕೆಲಸದ ವಾತಾವರಣ ದೊರೆಯಲಿದ್ದು, ಇತ್ತ ಗ್ರಾಮೀಣ ರೈತರಿಗೆ ತಮ್ಮ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ ಸಿಗಲಿದೆ. ಗಣಿ ನಿಧಿ ಸದ್ಬಳಕೆಯಿಂದ ಜಿಲ್ಲೆಯ ಪಶುಸಂಗೋಪನೆ ಕ್ಷೇತ್ರ ಹೊಸ ಮನ್ವಂತರಕ್ಕೆ ಸಾಕ್ಷಿಯಾಗುತ್ತಿದೆ.
ಗಣಿ ಬಾಧಿತ ಪ್ರದೇಶದ ರೈತರು ಹಾಗೂ ಮೂಕ ಪ್ರಾಣಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದು ನಮ್ಮ ಆದ್ಯತೆ. ಪಾಲಿಕ್ಲಿನಿಕ್ ನಿರ್ಮಾಣದಿಂದ ಸ್ಕ್ಯಾನಿಂಗ್, ಮೇಜರ್ ಸರ್ಜರಿ ಸೌಲಭ್ಯಗಳು ಇಲ್ಲೇ ಸಿಗಲಿವೆ. 20.68 ಕೋಟಿ ರೂ. ವೆಚ್ಚದ ಈ ಕಾಮಗಾರಿಗಳು ಪೂರ್ಣಗೊಂಡರೆ ಹೊಸಪೇಟೆ ಭಾಗದ ಪಶುಸಂಗೋಪನೆ ಕ್ಷೇತ್ರಕ್ಕೆ ಹೊಸ ಚೈತನ್ಯ ಬರಲಿದೆ.ಡಾ. ಶರಣೇಗೌಡ ಡಿಡಿ, ಪಶುಪಾಲನಾ ಇಲಾಖೆ, ವಿಜಯನಗರ