ಹೊಸಪೇಟೆ ಜಿಲ್ಲಾ ಸಶಸ್ತç ಪೊಲೀಸ್ ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಎಡಿಸಿ ಸಲೀಮ ಪಾಷಾ ಗೌರವ ವಂದನೆ ಸ್ವೀಕರಿಸಿದರು. 
ವಿಜಯನಗರ

ಪೊಲೀಸರ ಶೌರ್ಯ, ತ್ಯಾಗದ ಪ್ರತೀಕ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಎಎಸ್ಪಿ ಸಲೀಮ ಪಾಷಾ ಅಭಿಪ್ರಾಯ
ಹೊಸಪೇಟೆ: ಪೊಲೀಸರು ಸರ್ಕಾರದ ಅವಿಭಾಜ್ಯ ಅಂಗವಾಗಿ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ನಿವೃತ್ತ ಎಎಸ್ಪಿ ಸಲೀಮ ಪಾಷಾ ಹೇಳಿದರು.
ನಗರದ ಜಿಲ್ಲಾ ಸಶಸ್ತç ಪೊಲೀಸ್ ಮೈದಾನದಲ್ಲಿ ಗುರುವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪೊಲೀಸರ ಶೌರ್ಯ, ತ್ಯಾಗ ಮತ್ತು ಸಾರ್ವಜನಿಕರು ಅವರ ಮೇಲಿಟ್ಟ ನಂಬಿಕೆಯ ಪ್ರತೀಕ ದಿನವಾಗಿದೆ. ಈ ಪೊಲೀಸರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಕೆಲಸದ ಅವಧಿಯಲ್ಲಿ ಎಷ್ಟೇ ಒತ್ತಡಗಳಿದ್ದರೂ, ಅದನ್ನು ಮನೆಗೆ ಕೊಂಡೊಯ್ಯ ಬಾರದು. ಕುಟುಂಬದವರ ಮೇಲೆ ಒತ್ತಡ ಹೇರದೆ ಸಾಮಾಜಿಕವಾಗಿ ಆರೋಗ್ಯಕರವಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ವಿಜಯನಗರ ಜಿಲ್ಲಾ ಪೊಲೀಸ್ ಘಟಕ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಿತರಕ್ಷಣೆಗಾಗಿ 2025-26ನೇ ಸಾಲಿನಲ್ಲಿ ಹಮ್ಮಿಕೊಂಡಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಸಿಬ್ಬಂದಿಗಾಗಿ ವಾರ್ಷಿಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಒಂದು ವರ್ಷದಲ್ಲಿ 268 ಸಿಬ್ಬಂದಿ ಹಾಗೂ ಕುಟುಂಬದವರು ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸ್ ಕಲ್ಯಾಣ ನಿಧಿಯಿಂದ ಪೊಲೀಸ್ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1.25ಲಕ್ಷ ರೂ. ನೀಡಲಾಗಿದೆ. ಇನ್ನು ಇತರೆ ಸಹಾಯಕ್ಕಾಗಿ ಒಟ್ಟು 12.61ಲಕ್ಷ ರೂ. ಧನ ಸಹಾಯ ನೀಡಲಾಗಿದೆ. ಅರೋಗ್ಯ ಭಾಗ್ಯ ಯೋಜನೆಯಡಿ ಒಂದು ವರ್ಷದಲ್ಲಿ 32 ನಿವೃತ್ತ ಪೊಲೀಸರಿಗೆ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈ ಸಾಲಿನನಲ್ಲಿ ನಿವೃತ್ತ ಸಿಬ್ಬಂದಿಗಳಿಗೆ ಒಟ್ಟು 2.36 ಲಕ್ಷ ರೂ. ಧನ ಸಹಾಯ ನೀಡಲಾಗಿದೆ ಎಂದರು.
2025ರ ಪೊಲೀಸ್ ಧ್ವಜ ದಿನಾಚರಣೆಯ ನಿಮಿತ್ತ ಜಿಲ್ಲೆಯಾದ್ಯಂತ ಧ್ವಜ ಮಾರಾಟದಿಂದ 26.82 ಲಕ್ಷ ರೂ. ನಿಧಿ ಸಂಗ್ರಹಿಸಲಾಗಿದೆ. ಈ ಮೊತ್ತವನ್ನು ಶೇ.50ರಷ್ಟು ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಹಾಗೂ ಉಳಿದ ಮೊತ್ತವನ್ನು ಸಮಾನವಾಗಿ ಕೇಂದ್ರ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಇದರಿಂದ ನಿವೃತ್ತ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹೆಚ್ಚಿನ ವೈದ್ಯಕೀಯ ಸಹಾಯ ಮಾಡಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಇಲಾಖೆಯ 6 ತುಕಡಿಗಳಿಂದ ಆಕರ್ಷಕ ಪೆರೇಡ್ ನಡೆಸಲಾಯಿತು. ಎಎಸ್ಪಿ ಮಂಜುನಾಥ, ಡಿವೈಎಸ್ಪಿ ಡಾ.ಮಂಜುನಾಥ ಇತರರಿದ್ದರು.