ಹೊಸಪೇಟೆ ತಾಲೂಕಿನ ಗುಂಡಾ ಸ್ಟೇಷನ್ ನಲ್ಲಿ ಬಾಲಕರು ಕೈಗೆ ಕಾರ್ಖಾನೆ ದೂಳು
- ಮರಿಯಮ್ಮನಹಳ್ಳಿ ಸುತ್ತಮುತ್ತ
- ಕಾರ್ಖಾನೆಗಳಿಂದ ಪರಿಸ್ಥಿತಿ ಶೋಚನೀಯ
- ಮನೆ, ಊಟ, ನೀರು ಕಲುಷಿತ
ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಕಲಾವಿದರ ತವರೂರು ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಕಾರ್ಖಾನೆ ಗಳಿಂದ ಹೊರ ಹೊಮ್ಮುವ ಅಪಾಯಕಾರಿ ಧೂಳು ಹಲವಾರು ಊರುಗಳ ಜನರ ಉಸಿರು ಕಟ್ಟಿಸುತ್ತಿದೆ.
ಅಭಿವೃದ್ಧಿ ಹೆಸರಲ್ಲಿ ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸಲಾಗುತ್ತಿದೆ. ಯುವಕರಿಗೆ ಉದ್ಯೋಗದ ಅಮಿಷವೊಡ್ಡಿ ಸಾವಿರಾರು ಎಕರೆ ಕೃಷಿ ಜಮೀನನ್ನು ಕಡಿಮೆ ದರಕ್ಕೆ ಖರೀದಿಸಲಾಗುತ್ತಿದೆ. ಆದರೆ, ಕಾರ್ಖಾನೆಗಳ ಧೂಳು ಎಳೆಂಟು ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಹರಡುತ್ತಿದೆ.
ತಾಲೂಕಿನ ದರಸಗುಪ್ಪೆ, ಕಪರನಕೊಪ್ಪಲು, ಡಾಣಪುರ, ಹನುಮನಹಳ್ಳಿ, ವ್ಯಾಸನಕೆರೆ, ಗುಂಡಾ ಸ್ಟೇಷನ್, ಗೊಲ್ಲರಹಳ್ಳಿ ಸೇರಿದಂತೆ ಇತರೆಡೆ ಮನೆಗಳ ಮೇಲೆ ಕಾರ್ಖಾನೆ ಧೂಳು ಬೀಳುತ್ತಿದೆ. ಇದರಿಂದಾಗಿ ಜನರು ಕಿಟಕಿ, ಹೊಸ ಮನೆಗಳಿಗೂ ಕಾರ್ಖಾನೆಯ ಮಸಿ ಮೆತ್ತಿಕೊಳ್ಳುತ್ತಿದೆ. ಹೆಂಚಿನ ಮನೆಗಳಲ್ಲಿ ವಾಸ ಮಾಡುವವರು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆಂಚುಗಳ ಸಂದಿಯಲ್ಲಿ ಮನೆಯೊಳಗೆ ಬೀಳುವ ಧೂಳಿನಿಂದ ಕುಡಿವ ನೀರು, ಆಹಾರ ಕಲುಷಿತವಾಗುತ್ತಿದೆ. ಈ ಗ್ರಾಮಗಳ ಜನರು ಮನೆಯ ಹೊರಗೆ ಬಟ್ಟೆ ಒಣಗಲು ಹಾಕುವುದನ್ನೇ ಬಿಟ್ಟಿದ್ದಾರೆ.
ಮನೆಯಲ್ಲಿ ಕಾರ್ಖಾನೆ ಧೂಳು. ಬಾಗಿಲುಗಳನ್ನು ಮುಚ್ಚಿಕೊಳ್ಳುವ ಪರಿಸ್ಥಿತಿ ಇದೆ. ಕಾರ್ಖಾನೆಗಳ ಧೂಳು ಗಾಳಿಯನ್ನು ಕಲುಷಿತ ಮಾಡುತ್ತಿದೆ. ವಾಯು ಮಾಲಿನ್ಯದಿಂದಾಗಿ ಜನರು ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನರಲ್ಲಿ ಅಸ್ತಮಾ ರೋಗ ಅವರಿಸುತ್ತಿದ್ದು, ಅವರ ಪಾಡು ಗಂಭೀರವಾಗಿದೆ. ಉಸಿರಾಟದ ಸಮಸ್ಯೆ, ಕೆಮ್ಮು, ವಾಂತಿ ಸಮಸ್ಯೆ ಸಾಮಾನ್ಯವಾಗಿದೆ. ಮನೆಯಿಂದ ಹೊರಗೆ ಬಂದರೆ ಧೂಳು ಸೇವಿಸಬೇಕು ಎಂಬ ಕಾರಣಕ್ಕೆ ಜನರು ವಾಯು ವಿಹಾರಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ.
ಬೇಸಾಯಕ್ಕೂ ಮಾರಕ, ಮೇವಿಗೂ ಸಮಸ್ಯೆ
ಕಾರ್ಖಾನೆಯ ಧೂಳು ಬೆಳೆಗಳ ಮೇಲೂ ಬೀಳುತ್ತಿರುವುದರಿಂದ ಕೂಡ ಸಮಸ್ಯೆಯಾಗಿದೆ. ಮೆಕ್ಕೆಜೋಳ, ಬಿಳಿ ಜೋಳ, ಸೂರ್ಯಕಾಂತಿ ಇತರ ಬೆಳೆಗಳ ಮೇಲೆ ಕಪ್ಪು ಧೂಳು ಬೀಳುತ್ತಿದೆ. ಇದರಿಂದಾಗಿ ಕೃಷಿ ಮಾಡುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳನ್ನು ಹೊಲದಲ್ಲೇ ಬಿಡುವ ಪರಿಸ್ಥಿತಿ ಬಂದಿದೆ. ಕಬ್ಬು, ತರಕಾರಿ, ಬತ್ತದ ಬೆಳೆಗಳ ಮೇಲೂ ಧೂಳು ಬೀಳುತ್ತಿದ್ದು ರೈತರಿಗೆ ಮಾರಕವಾಗಿ ಪರಿಣಮಿಸಿದೆ. ಹುಲ್ಲಿನ ಮೇಲೆ ಧೂಳು ಬೀಳುವುದರಿಂದ ಜಾನುವಾರುಗಳು ಸರಿಯಾಗಿ ಮೇವು ತಿನ್ನುತ್ತಿಲ್ಲ. ಮೇವನ್ನು ನೀರಿನಲ್ಲಿ ತೊಳೆದು ರಾಸುಗಳಿಗೆ ಹಾಕುತ್ತಿದ್ದಾರೆ. ಪಶುಪಾಲಕರು ಒಣ ಹುಲ್ಲಿನ ಬಣವೆಗಳ ಮೇಲೆ ಟಾರ್ಪಾಲಿನ್ ಹೊದಿಸಿ ಧೂಳಿನಿಂದ ರಕ್ಷಿಸಿಕೊಳ್ಳುತ್ತಿದ್ದಾರೆ.
ಕಾರ್ಖಾನೆಗಳ ಧೂಳಿನಿಂದ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದ್ದರೆ ಪರಿಸರ ಇಲಾಖೆಗೆ ದೂರು ನೀಡಲಿ. ಪರಿಸರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳುತ್ತಾರೆ. ಸಮಸ್ಯೆ ಬಗ್ಗೆ ಗಮನಹರಿದುವಂತೆ ನಾನು ಕೂಡ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವೆ.
ಕಾರ್ಖಾನೆಗಳ ಧೂಳು ನಾನಾ ಸಮಸ್ಯೆಗಳನ್ನು ತಂದೊಡ್ಡಿದೆ. ವೃದ್ಧರು, ರೋಗಿಗಳು ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಧೂಳು ಹರಡುವುದನ್ನು ತಡೆಯುವಂತೆ ಕಾರ್ಖಾನೆಗಳ ಪ್ರಧಾನ ವ್ಯವಸ್ಥಾಪಕರು, ಅಧಿಕಾರಿಗಳಿಗರ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.