ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಸಿದ್ಧಣ್ಣನ ರಂಗನವರ್ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
- ವೇಮನ ಜಯಂತಿಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅಭಿಪ್ರಾಯ
ಹೊಸಪೇಟೆ: ಮಹಾಯೋಗಿ ವೇಮನ ತಮ್ಮ ಪದ್ಯಗಳ ಮೂಲಕ ಮನುಕುಲದ ಉನ್ನತಿಗೆ ಸನ್ಮಾರ್ಗದ ಉಪದೇಶ ನೀಡಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡಕ್ಕೆ ಸರ್ವಜ್ಞ, ತಮಿಳಿಗೆ ತಿರುವಳ್ವರ್‌ರಂತೆ ತೆಲುಗು ಭಾಷೆಗೆ ವೇಮನರೇ ಮಹಾಕವಿ ಎಂಬುದು ಇಂದಿಗೂ ಜನಜನಿತವಾಗಿದೆ ಎಂದರು.
ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದರು ಎಂದರು.